ಐಪಿಎಲ್ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಭರ್ಜರಿ ಮೊತ್ತ ಪಡೆದಿದ್ದಾರೆ. ಕಳೆದ ಸೀಸನ್ನಲ್ಲಿ 32 ವಿಕೆಟ್ ಪಡೆದಿದ್ದ ಪಟೇಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು.
2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಹರ್ಷಲ್ ಪಟೇಲ್ ಖರೀದಿಗಾಗಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ 10.75 ಕೋಟಿ ನೀಡಿ ಆರ್ಸಿಬಿ ತಂಡ ಖರೀದಿಸಿತು. ವಿಶೇಷ ಎಂದರೆ ಕಳೆದ ಸೀಸನ್ನಲ್ಲಿ ಹರ್ಷಲ್ ಪಟೇಲ್ಗೆ ಆರ್ಸಿಬಿ ನೀಡಿದ್ದು ಕೇವಲ 20 ಲಕ್ಷ ರೂ. ಮಾತ್ರ.
ಇದೀಗ 10.75 ಕೋಟಿಗೆ ಹರಾಜಾಗುವ ಮೂಲಕ ಹರ್ಷಲ್ ಪಟೇಲ್ 10.55 ಕೋಟಿ ರೂ. ಅಧಿಕ ಮೊತ್ತ ಪಡೆದು ಆರ್ಸಿಬಿ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಇದೀಗ ಆರ್ಸಿಬಿ ತಂಡದಲ್ಲಿ ಐದು ಆಟಗಾರರು ಇದ್ದಾರೆ.
ಈ ಹಿಂದೆ ಆರ್ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್ ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.