ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸುಂಟಿಕೊಪ್ಪದಲ್ಲಿ ಚಾಲನೆ

ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸುಂಟಿಕೊಪ್ಪದಲ್ಲಿ ಚಾಲನೆ

CI   ¦    May 25, 2019 10:21:48 AM (IST)
ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸುಂಟಿಕೊಪ್ಪದಲ್ಲಿ ಚಾಲನೆ

ಮಡಿಕೇರಿ: ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅಂತಹ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರಮಟ್ಟದವರೆಗೆ ಕಳುಹಿಸುವ ದೃಷ್ಟಿಯಿಂದ ಆಯೋಜಿತ ಫುಟ್ಬಾಲ್ ಪಂದ್ಯಾವಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಬೆಟ್ಟಗೇರಿ ಕಾಫಿ ತೋಟ ಮಾಲೀಕ ವಿಶಾಲ್ ಶಿವಪ್ಪ ಕರೆ ನೀಡಿದ್ದಾರೆ.

ಸುಂಟಿಕೊಪ್ಪದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ 24ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯನ್ನು ಚೆಂಡು ಒಡೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗಿನ ಪ್ರಮುಖ ಕಾಫಿತೋಟಗಳಲ್ಲಿ ಒಂದಾದ ಬೆಟ್ಟಗೇರಿ ತೋಟದ ಕಾಫಿಯನ್ನು 'ಬೆಟ್ಟದ ಕಾಫಿ' ಎಂಬ ಉತ್ಪಾದನೆಯ ಮೂಲಕ ಬೆಂಗಳೂರಿನಲ್ಲಿ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಬೆಟ್ಟದ ಕಾಫಿಯ ಮಳಿಗೆಯನ್ನು ಸುಂಟಿಕೊಪ್ಪ, ಮಡಿಕೇರಿ, ಕುಶಾಲನಗರಗಳಲ್ಲಿ ಆರಂಭಿಸಲಾಗುವುದು. ಆ ಮೂಲಕ ಕೊಡಗಿನ ಕಾಫಿಯನ್ನು ರಾಜ್ಯದಾದ್ಯಂತ ಕಾಫಿ ಪ್ರಿಯರಿಗೆ ಪರಿಚಯ ಮಾಡಲಾಗುತ್ತಿದೆ ಎಂದೂ ವಿಶಾಲ್ ಶಿವಪ್ಪ ಹೇಳಿದರು.

ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.ಆದರೆ ಯಾರೂ ಕೊಡಗಿಗೆ ಭೇಟಿ ನೀಡಲು ಭಯ ಪಡುವ ಅವಶ್ಯಕತೆ ಇಲ್ಲ.ಪ್ರವಾಸಿಗರಿಗೆ ಕೊಡಗು ಸುರಕ್ಷಿತವಾಗಿದೆ ಮತ್ತು ಮುಕ್ತವಾಗಿದೆ ಎಂದು ಯುವ ಉದ್ಯಮಿ ವಿಶಾಲ್ ಶಿವಪ್ಪ ಕರೆ ನೀಡಿದರು.
ತನ್ನ ಅಜ್ಜ ಡಿ. ಶಿವಪ್ಪ ಅವರು ಕೂಡ ಫುಟ್ಬಾಲ್ ಪ್ರೇಮಿಯಾಗಿದ್ದು ಅವರ ಆಸೆಯನ್ನು ನೆರವೇರಿಸುವುದಕ್ಕಾಗಿ ತನ್ನ ತಂದೆ ಡಿ.ವಿನೋದ್ ಶಿವಪ್ಪ ಅವರು ಈ ಪಂದ್ಯಾವಳಿಯನ್ನು ಸುಂಟಿಕೊಪ್ಪದಲ್ಲಿ 23 ವರ್ಷಗಳ ಹಿಂದೆ ಪ್ರಾರಂಭಿಸಿದ್ದಾಗಿಯೂ ವಿಶಾಲ್ ಶಿವಪ್ಪ ಮಾಹಿತಿ ನೀಡಿದರು.

ಕ್ರೀಡಾಕೂಟದ ದ್ವಜಾರೋಹಣ ನೆರವೇರಿಸಿ ಹಾಸನ ಜಿಲ್ಲಾ ಗ್ರಾಹಕರ ಪರಿಹಾರ ವ್ಯಾಜ್ಯ ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಮಾತನಾಡಿ, ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಆಡಿರುವ ಆಟಗಾರರು ರಾಜ್ಯ,ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಮುಂದಿನ ವರ್ಷ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಪಂದ್ಯಾಟ ನಡೆಯಲಿದ್ದು, ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ಮಾತನಾಡಿ, ಸುಂಟಿಕೊಪ್ಪದಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಪಿಎಸ್ ಐ ಜಯರಾಮ್, ಬ್ಲೂಬಾಯ್ಸ್ ಯುವಕ ಸಂಘದ ಅಧ್ಯಕ್ಷ ಆದಿಶೇಷ, ಗೌರವಾಧ್ಯಕ್ಷ ಟಿ.ಎಸ್.ಪ್ರಸನ್ನ, ಪದಾಧಿಕಾರಿಗಳಾದ ಅನಿಲ್, ನರಸಿಂಹ, ಪ್ರಶಾಂತ್, ವಾಸುದೇವ್ ಇತರರು ಉದ್ಘಾಟನಾ ಕಾರ್ಯಕ್ರಮದಲ್ಲಿದ್ದರು.

ಮೊದಲ ದಿನ ಆತಿಥೇಯಕ್ಕೆ ಗೆಲವು - ಆತಿಥೇಯ ಬ್ಲೂಬಾಯ್ಸ್ ಯುವಕ ಸಂಘ ಮತ್ತು ಪನ್ಯ ಫುಟ್ಬಾಲ್ ತಂಡಗಳ ನಡುವಿನ ಮೊದಲ ದಿನದ ಪಂದ್ಯಾಟದಲ್ಲಿ ದ್ವಿತಿಯಾರ್ಧ 12 ನೇ ನಿಮಿಷದಲ್ಲಿ ಬ್ಲೂಬಾಯ್ಸ್ ತಂಡದ ಆಟಗಾರ ಮೊದಲ ಪ್ರವೀಣ್ ಗೋಲು ಬಾರಿಸಿದರೆ 16 ನೇ ನಿಮಿಷದಲ್ಲಿ ತೌಫಿಕ್ ಗೋಲು ಗಳಿಸಿ ಆತಿಥೇಯ ತಂಡಕ್ಕೆ ಆರಂಭಿಕ ದಿನದ ಜಯ ತಂದುಕೊಟ್ಟರು.

ಇಂದಿನ ಪಂದ್ಯಗಳು
ಮದ್ಯಾಹ್ನ 2ಕ್ಕೆ; ಶೀತಲ್ ಎಫ್.ಸಿ.ಮೈಸೂರು - ಇಕೆಎನ್.ಎಫ್.ಸಿ.ಇರಿಟಿ
ಮದ್ಯಾಹ್ನ 3ಕ್ಕೆ; ಎನ್.ವೈ.ಸಿ ಕೊಡಗರಹಳ್ಳಿ - ಅಶೋಕ್ ಎಫ್.ಸಿ.ಮೈಸೂರು
ಸಂಜೆ 4ಕ್ಕೆ ;ಸಿಟಿಜನ್ ಎಫ್.ಸಿ.ಉಪ್ಪಳ - ಕೊಡಗು ಎಫ್.ಸಿ.ಕೊಡಗು

More Images