ಮೇ 24ರಿಂದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್

ಮೇ 24ರಿಂದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್

LK   ¦    May 22, 2019 05:45:06 PM (IST)
ಮೇ 24ರಿಂದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್

ಮಂಡ್ಯ: ಇಂಡೋ ಇಂಟರ್ ನ್ಯಾಷನಲ್ ಕಬಡ್ಡಿ ಫೆಡರೇಷನ್ ಮತ್ತು ಡಿ ಸ್ಪೋಟ್ಸ್ ವತಿಯಿಂದ ನಡೆಯುತ್ತಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ಗೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಪಂದ್ಯಾವಳಿ ಜಾಗತಿಕ ಗಮನ ಸೆಳೆದಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್‍ಬಾಬು (ಕಬಡ್ಡಿ ಬಾಬು)ತಿಳಿಸಿದರು.

ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅತಿ ಕಡಿಮೆ ಅವಧಿಯಲ್ಲಿ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ಗೆ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ಈ ಟೂರ್ನಿ ಇತಿಹಾಸ ನಿರ್ಮಾಣ ಮಾಡುತ್ತಿದ್ದು, ಪ್ರೋ ಕಬಡ್ಡಿಗಿಂತ ಹೆಚ್ಚಿನ ಆಟಗಾರರಿಗೆ ವೇದಿಕೆ ಕಲ್ಪಿಸಿದೆ. ಕಬಡ್ಡಿ ಆಟಗಾರರಿಗೆ ಮಾನ್ಯತೆ ಜತೆಗೆ ಆರ್ಥಿಕವಾಗಿಯೂ ಅನುಕೂಲವಾಗುತ್ತಿದೆ. ಪ್ರೋ ಕಬಡ್ಡಿಗೆ ಪರ್ಯಾಯವಾಗಿ ಈ ಲೀಗ್ ಜನಮನ ಗೆಲ್ಲುವಲ್ಲಿ ಸಫಲವಾಗಿದೆ. ಪುಣೆಯ ಛತ್ರಪತಿಯ ಬಾಲೆವಾಡಿ ಒಳ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಂತದ ಪಂದ್ಯಗಳು ನಡೆಯಿತು ಎಂದು ವಿವರಿಸಿದರು.

ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರು ಮೈಸೂರು ಮತ್ತು ಬೆಂಗಳೂರಿನಲ್ಲಿ ಎರಡು ಮತ್ತು ಮೂರನೇ ಹಂತದ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದಾರೆ. ಇದೀಗ ಮೈಸೂರಿನ ನಜರ್‍ಬಾದ್‍ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎರಡನೇ ಹಂತದ ಪಂದ್ಯಗಳು ಇದೇ 24ರಿಂದ 29ರವರೆಗೆ ನಡೆಯಲಿದೆ. ಈ ಪಂದ್ಯಗಳು ಡಿಡಿ ಸ್ಪೋರ್ಟ್ಸ್, ಡಿ ಸ್ಪೋರ್ಟ್ಸ್, ಎಂಟಿವಿ, ಅನೇಕ ಹಿಂದಿ, ಮರಾಠಿ, ಮಲಯಾಳಂ ಸೇರಿದಂತೆ ಪ್ರಾದೇಶಿಕ ವಾಹಿನಿಗಳು ಪಂದ್ಯಾವಳಿಯನ್ನು ನೇರ ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದರು.

ಮೇ 24ರಂದು ಮೈಸೂರಿನಲ್ಲಿ ಪುಣೆ ಪ್ರೈಡ್-ಪಾಂಡಿಚೇರಿ ಪ್ರಿಡೇಟರ್ಸ್, ಹರಿಯಾಣ ಹಿರೋಸ್-ಬೆಂಗಳೂರು ರಿನೋಸ್, ದಿಲ್ಲಾರೆ ದೆಹಲಿ-ತೆಲುಗು ಬುಲ್ಸ್ ನಡುವೆ ಹಣಾಹಣಿ ನಡೆಯಲಿದೆ. 25ರಂದು ಮಹಿಳೆಯರ ಸಿ ಮತ್ತು ಮಹಿಳೆಯರ ಡಿ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಚೆನ್ನೈ ಚಾಲೆಂಜರ್ಸ್ ಮತ್ತು ಮುಂಬೈ ಜೆ ರಾಜ್ ಮತ್ತು ಹರಿಯಾಣ ಹಿರೋಸ್-ದಿಲ್ಲಾರ್ ದಿಲ್ಲಿ ನಡುವೆ ಪಂದ್ಯ ನಡೆಯಲಿದೆ ಎಂದು ಹೇಳಿದರು.

ಮೇ. 26ರಂದು ಪುಣೆ ಪ್ರೈಡ್ -ಚೆನ್ನೈ ಚಾಲೆಂಜರ್ಸ್, ಬೆಂಗಳೂರು ರಿನೋಸ್-ತೆಲುಗು ಬುಲ್ಸ್, ಪಾಂಡಿಚೇರಿ ಪ್ರಿಡೇಟರ್ಸ್ -ಮುಂಬೈ ಜೆ ರಾಜೆ ನಡುವೆ ಸ್ಪರ್ಧೆಗೆ ಅಖಾಡ ಅಣಿಯಾಗಿದೆ. ಮೇ 27ರಂದು ಹರಿಯಾಣ ಹಿರೋಸ್-ತೆಲುಗು ಬುಲ್ಸ್, ಬೆಂಗಳೂರು ರೀನೋಸ್-ದಿಲ್ಲಾರ್ ದೆಹಲಿ, ಪುಣೆ ಪ್ರೈಡ್-ಮುಂಬೈ ಜೆ ರಾಜ್ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಮೂರನೇ ಹಾಗೂ ಕೊನೆ ಹಂತದ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂ 1ರಿಂದ 4ರವರೆಗೆ ನಡೆಯಲಿದೆ. ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳನ್ನು ರಾಜಧಾನಿ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಇದಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಅಂತಿಮ ಹಂತದ ಪಂದ್ಯಗಳು ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಹಿಮಾಚಲ ಪ್ರದೇಶದ ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಕಬಡ್ಡಿಯ ತವರೂರು, ಕಬಡ್ಡಿ ಗುರುತಿಸಿಕೊಂಡಿರುವ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ಕಬಡ್ಡಿ ಪಂದ್ಯಗಳಿಗೆ ಸಹಸ್ರಾರು ಮಂದಿ ಸೇರಿ ಪ್ರೋತ್ಸಾಹ ಮಾಡುವುದನ್ನು ನೋಡಿದ್ದೇವೆ. ಕಬಡ್ಡಿ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ನಡೆಸಲು ಉದ್ದೇಶಿಸಿದೆ ಎಂದು ತಿಳಿಸಿದರು.

ಮಂಡ್ಯದ ಅಭಿಷೇಕ್ ತೆಲುಗು ಬುಲ್ಸ್, ಶಶಿಧರ್ ದಿಲ್ಲೆರ್ ದಿಲೆ ವದೆಹಲಿ ಹಾಗೂ ವೆಂಕಟೇಶ್ ಪುಣೆ ಪ್ರೈಡ್ಸ್ ಗೆ ಆಯ್ಕೆಯಾಗಿದ್ದು, ಈ ಆಟಗಾರರು ದೇಶವನ್ನಷ್ಟೇ ಅಲ್ಲದೆ, ಜಾಗತಿಕ ಕಬಡ್ಡಿ ಲೋಕದ ಗಮನ ಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯ ಜನರಲ್ಲಿ ರಕ್ತಗತವಾಗಿ ಕಬಡ್ಡಿ ಕ್ರೀಡೆಯಿದ್ದು, ಮೂವರು ಪ್ರತಿಭಾವಂತ ಆಟಗಾರರು ಲೀಗ್‍ಗೆ ಆಯ್ಕೆಯಾಗಿರುವುದು ಇಲ್ಲಿನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಸಂಸ್ಥೆಯ ಪ.ನಾ. ಸುರೇಶ್, ಹರೀಶ್‍ಕುಮಾರ್, ವೀರೇಂದರ್ ಇತರರು ಗೋಷ್ಠಿಯಲ್ಲಿದ್ದರು.