ಭಾರತದ ಪರ ಗರಿಷ್ಟ ವಿಕೆಟ್ ಪಡೆಯಬೇಕು: ಮೊಹಮ್ಮದ್ ಸಿರಾಜ್

ಭಾರತದ ಪರ ಗರಿಷ್ಟ ವಿಕೆಟ್ ಪಡೆಯಬೇಕು: ಮೊಹಮ್ಮದ್ ಸಿರಾಜ್

Jayashree Aryapu   ¦    Apr 09, 2021 02:23:10 PM (IST)
ಭಾರತದ ಪರ ಗರಿಷ್ಟ ವಿಕೆಟ್ ಪಡೆಯಬೇಕು: ಮೊಹಮ್ಮದ್ ಸಿರಾಜ್

ಚೆನ್ನೈ : ಕ್ರಿಕೆಟ್​ನಲ್ಲಿ ವೇಗವಾಗಿ ಬೆಳೆಯುತ್ತಿರುವ ವೇಗಿ ಮೊಹಮ್ಮದ್ ಸಿರಾಜ್, ಮೈದಾನದಲ್ಲಿ ಕಠಿಣ ಹೆಜ್ಜೆಯನ್ನಿಡಲು ಮತ್ತು ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ. ಉದಯೋನ್ಮುಖ ಕ್ರಿಕೆಟರ್ ಆಗಿರುವ ಸಿರಾಜ್​, ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್​ ಎನಿಸಕೊಳ್ಳುವುದು, ತಮ್ಮ ಕನಸು ಎಂದಿದ್ದಾರೆ.

27 ವರ್ಷದ ವೇಗಿ ಭಾರತದ ಪರ 5 ಟೆಸ್ಟ್, ಒಂದು ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿ ಕಠಿಣ ಪೈಪೋಟಿಯಿದ್ದರೂ ಸಿಕ್ಕ ಕೆಲವೇ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಮೂರು ಮಾದರಿಯ ಕ್ರಿಕೆಟ್​ನಲ್ಲಿ ತಮ್ಮ ಸಾಧನೆಯ ಶ್ರೇಯವನ್ನು ತಂಡದ ಸಹ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾಗೆ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ, 'ನಾನು ಬೌಲಿಂಗ್ ಮಾಡುವಾಗಲೆಲ್ಲಾ ನನ್ನ ಪಕ್ಕದಲ್ಲೆ ಇದ್ದು ಮಾರ್ಗದರ್ಶನ ನೀಡುತ್ತಾರೆ. ಅಂತಹ ಅನುಭವಿ ಆಟಗಾರನಿಂದ ಕಲಿಯುವುದಕ್ಕೆ ನನಗೆ ಬಹಳ ಖುಷಿಯಿದೆ' ಎಂದು ಸಿರಾಜ್ ಆರ್​ಸಿಬಿ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

'ನಾನು ಇಶಾಂತ್​ ಶರ್ಮಾ ಅವರೊಂದಿಗೂ ಆಡಿದ್ದೇನೆ. ಅವರು 100 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದಕ್ಕೆ ತುಂಬಾ ಉತ್ತಮ ಭಾವನೆಯಿದೆ. ನನಗೆ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಕನಸಿದೆ. ಅದಕ್ಕಾಗಿ ನನಗೆ ಯಾವಾಗ ಅವಕಾಶ ಸಿಕ್ಕರೂ ಕಠಿಣ ಪರಿಶ್ರಮ ವಹಿಸುತ್ತೇನೆ ಎಂದಿದ್ದಾರೆ.

ಆರ್​ಸಿಬಿ ಪರ ಸಿರಾಜ್ 35 ಪಂದ್ಯಗಳನ್ನಾಡಿದ್ದು, 39 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಕೆಲವು ಅದ್ಭುತ ಪ್ರದರ್ಶನ ತೋರಿದ್ದರು. ಈ ವರ್ಷವೂ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.