ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಕ್ಟೋಬರ್ 4 ಮಹತ್ವದ ದಿನವಾಗಿದೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಇದುವರೆಗಿನ ಗರಿಷ್ಠ ಸಾಧನೆ ಮಾಡಿದ್ದಾರೆ.
ಇಲ್ಲಿಯವರೆಗಿನ 18 ಆವೃತ್ತಿಗಳಲ್ಲಿ ಭಾರತ ಗರಿಷ್ಠ 69 ಪದಕಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ 11ನೇ ದಿನಕ್ಕೆ ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಅಕ್ಟೋಬರ್ 7ರವರೆಗೆ ಅಂದರೆ ಇನ್ನೂ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಭಾರತದ ಒಟ್ಟು ಪದಕಗಳ ಸಂಖ್ಯೆ ಹೆಚ್ಚಳವಾಗಲಿದೆ.
ಮಂಗಳವಾರ 69 ಪದಕಗಳೊಂದಿಗೆ ದಿನವನ್ನು ಅಂತ್ಯಗೊಳಿಸಿದ್ದ ಭಾರತ ಇಂದು(ಅ.04) ಸಂಜೆಯ ವೇಳೆಗೆ ಇನ್ನೂ 12 ಪದಕಗಳನ್ನು ಸೇರ್ಪಡೆಗೊಳಿಸಿದೆ. ಭಾರತವು ಇದೀಗ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದು, ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಸ್ವರ್ಣ ಗೆದ್ದ ದಾಖಲೆಗೂ ಭಾಜನವಾಗಿದೆ. ಈ ಹಿಂದೆ ಏಶ್ಯನ್ ಗೇಮ್ಸ್ ನಲ್ಲಿ ಭಾರತ ಗರಿಷ್ಠ 16 ಚಿನ್ನದ ಪದಕಗಳಿಗೆ ಕೊರಳೊಡ್ಡಿತ್ತು.