ಲಖನೌ: ಮೊರಾಕ್ಕೊ ವಿರುದ್ಧ ವಿಶ್ವ ಗುಂಪು-2 ಪಂದ್ಯವನ್ನು 4-1ರಲ್ಲಿ ಗೆದ್ದ ಭಾರತ ತಂಡ ಟೆನಿಸ್ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್ ಟೂರ್ನಿಯಲ್ಲಿ ವಿಶ್ವ ಗುಂಪು-1 ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿಗ್ಗಜ ಟೆನಿಸಿಗ ರೋಹನ್ ಬೋಪಣ್ಣಗೆ ಡೇವಿಸ್ ಕಪ್‌ನಲ್ಲಿ ಗೆಲುವಿನ ವಿದಾಯ ಸಿಕ್ಕಿದೆ.
ಭಾನುವಾರ ನಡೆದ ಡಬಲ್ಸ್ ಹಾಗೂ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಭಾರತದ ಪಾಲಾದವು. ಡಬಲ್ಸ್‌ನಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಹಾಗೂ ಯೂಕಿ ಭಾಂಬ್ರಿ ಜೋಡಿ ಮೊರಾಕ್ಕೊದ ಎಲಿಯಟ್ ಬೆನ್ಚೆಟ್ರಿಟ್-ಯೂನೆಸ್ ಲಲಾಮಿ ವಿರುದ್ಧ 6-2, 6-1 ಅಂತರದಲ್ಲಿ ಗೆಲುವು ಸಾಧಿಸಿತು.
43 ವರ್ಷದ ಬೋಪಣ್ಣ ಗೆಲುವಿನೊಂದಿಗೆ ತಮ್ಮ 2 ದಶಕಗಳ ಡೇವಿಸ್ ಕಪ್ ಪಯಣಕ್ಕೆ ವಿದಾಯ ಹೇಳಿದರು. 2002ರಲ್ಲಿ ಡೇವಿಸ್ ಕಪ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ 33 ಮುಖಾಮುಖಿಗಳಲ್ಲಿ 50 ಪಂದ್ಯಗಳನ್ನಾಡಿದ್ದು, ಒಟ್ಟು 23 ಗೆಲುವು ಸಾಧಿಸಿದ್ದಾರೆ. ಡಬಲ್ಸ್‌ನಲ್ಲಿ ಅವರು 13 ಪಂದ್ಯಗಳಲ್ಲಿ ಗೆದ್ದಿದ್ದರೆ ಇನ್ನುಳಿದ 10 ಗೆಲುವು ಸಿಂಗಲ್ಸ್‌ನಲ್ಲಿ ಬಂದಿವೆ.
ಭಾನುವಾರ ಬೋಪಣ್ಣಗೆ ವಿದಾಯ ಕೋರಲು ಅವರ ಕುಟುಂಬಸ್ಥರು, ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು. ಬೋಪಣ್ಣರ ಫೋಟೋ ಹಾಗೂ ತ್ರಿವರ್ಣ ಧ್ವಜ ಮುದ್ರಿಸಿದ ಜೆರ್ಸಿ ಧರಿಸಿದ್ದ ಅಭಿಮಾನಿಗಳು ವಿದಾಯದ ಪಂದ್ಯದುದ್ದಕ್ಕೂ ಬೋಪಣ್ಣರನ್ನು ಹುರಿದುಂಬಿಸಿದರು. ಪಂದ್ಯ ಮುಗಿದ ಬಳಿಕ ಜೆರ್ಸಿಯನ್ನು ಅಂಕಣದಲ್ಲಿ ಹಾಸಿ ಬೋಪಣ್ಣ ಡೇವಿಸ್ ಕಪ್‌ಗೆ ವಿಶೇಷವಾಗಿ ವಿದಾಯ ಕೋರಿದರು. ಬೋಪಣ್ಣ ಭಾರತದ ಧ್ವಜವನ್ನು ಮೈಮೇಲೆ ಹೊದ್ದು ಸಂಭ್ರಮಿಸಿದರೆ, ಸಹ ಆಟಗಾರರು ಅವರನ್ನು ಭುಜದ ಮೇಲೆ ಹೊತ್ತುಕೊಂಡು ಅಂಕಣದಲ್ಲಿ ಸುತ್ತಾಡಿದರು.
ಲಖನೌಗೇ ತೆರಳಿ ಬೋಪಣ್ಣಗೆ ಹುರಿದುಂಬಿಸಿದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅಧಿಕಾರಿಗಳು, ರಾಜ್ಯದ ಹೆಮ್ಮೆಯ ಆಟಗಾರನಿಗೆ ಸನ್ಮಾನವನ್ನೂ ಮಾಡಿದರು.