News Kannada
Tuesday, June 06 2023
ಬೆಂಗಳೂರು ನಗರ

ಬಿಜೆಪಿಯ ಕೋಮುವಾದ ತಿರಸ್ಕರಿಸಿ ಕಾಂಗ್ರೆಸ್‌ನ ಬಂಧುತ್ವ ಸಿದ್ಧಾಂತ ಬಿಗಿದಪ್ಪಿದ ಜನತೆ: ಸಿದ್ದರಾಮಯ್ಯ

People rejected BJP's communalism and tightened Congress's kinship theory: Siddaramaiah
Photo Credit :

ಬೆಂಗಳೂರು: ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶವಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಾವುದೇ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲದ ಅಭಿಮಾನಿಗಳು ರಾತ್ರಿ ಹಗಲು ಶ್ರಮಪಟ್ಟಿರುತ್ತಾರೆ. ಅವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಡೆಸಿರುವ ಪ್ರಯತ್ನವನ್ನು ಮರೆಯಲಾಗದು. ಬಹಳ ಮುಖ್ಯವಾಗಿ ಕರ್ನಾಟಕದ ಚುನಾವಣಾ ಪ್ರಚಾರ ಪ್ರಾರಂಭವಾಗಿದ್ದೇ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ. ಈ ಯಾತ್ರೆ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಈ ಫಲಿತಾಂಶದ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ ಎಂದು ತಿಳಿಸಿದರು.

ಅದೇ ರೀತಿ ಪ್ರಿಯಾಂಕ ಗಾಂಧಿಯವರ ಚುನಾವಣಾ ಪ್ರಚಾರ ಈ ಬಾರಿಯ ಹೊಸ ಆಕರ್ಷಣೆಯಾಗಿತ್ತು. ಬಹಳ ಮುಖ್ಯವಾಗಿ ಮಹಿಳಾ ಮತದಾರರ ಮೇಲೆ ಪ್ರಿಯಾಂಕ ಪ್ರಭಾವ ಬೀರಿದ್ದರು. ಅವರನ್ನು ನೋಡಿದ್ದ ಬಹಳಷ್ಟು ಮತದಾರರು ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಂಡಿದ್ದರು. ಪಕ್ಷ ಪ್ರಿಯಾಂಕ ಗಾಂಧಿಯವರಿಗೆ ಕೃತಜ್ಞವಾಗಿದೆ ಎಂದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ತಮ್ಮೆಲ್ಲ ಬಿಡುವಿರದ ಕಾರ್ಯಕ್ರಮಗಳ ನಡುವೆಯೂ ರಾಜ್ಯಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ಕನ್ನಡಿಗನೊಬ್ಬ ಎಐಸಿಸಿ ಅಧ್ಯಕ್ಷರಾಗಿರುವುದು ಕೂಡಾ ಕನ್ನಡಿಗ ಮತದಾರರ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿದೆ ಎಂದರು. ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ, ಕನ್ನಡ-ಕನ್ನಡಿಗ ವಿರೋಧಿ ನಿಲುವು, ದುರಾಡಳಿತ ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಜನ ರೋಸಿಹೋಗಿದ್ದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹೀಗೆ ಪ್ರತಿಯೊಂದು ವರ್ಗದ ಜನ ಕೂಡಾ ಬಿಜೆಪಿ ಪಕ್ಷದ ಸೋಲನ್ನು ಬಯಸಿದ್ದರು.

ನಾಲ್ಕು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕ ಖಂಡಿತ ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ, ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ. ಇವುಗಳನ್ನೆಲ್ಲ ಹಳಿಗೆ ಕರೆತರುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಆದರೆ ಈ ಫಲಿತಾಂಶ ಕೇವಲ ಬಿಜೆಪಿ ದುರಾಡಳಿತದ ವಿರುದ್ಧದ ಜನಮತ ಮಾತ್ರ ಅಲ್ಲ, ಇದು ಕಾಂಗ್ರೆಸ್ ಪಕ್ಷದ ಪರವಾಗಿರುವ ಫಲಿತಾಂಶ ಕೂಡಾ ಹೌದು. ಇದು ಸುಭದ್ರ ಸರ್ಕಾರಕ್ಕಾಗಿ ಜನ ನೀಡಿರುವ ಮತಗಳಾಗಿವೆ. ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತವನ್ನು ರಾಜ್ಯದ ಮತದಾರರು 2013ರಿಂದ 2018ರ ಕಾಂಗ್ರೆಸ್ ಆಡಳಿತದ ಜೊತೆ ಖಂಡಿತ ಹೋಲಿಸಿ ಮತನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಬೇರೆ ಯಾವ ಪಕ್ಷಗಳು ಕೂಡಾ ಸುಭದ್ರ ಸರ್ಕಾರ ನೀಡಿರುವ ಉದಾಹರಣೆಗಳಿಲ್ಲ. 2013-2018ರ ಅವಧಿಯ ನಮ್ಮ ಆಡಳಿತದಲ್ಲಿ ನಾವು ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ನಮ್ಮ ದಕ್ಷ ಮತ್ತು ಜನಪರ ಆಡಳಿತವನ್ನು ಜನ ಮರೆತಿಲ್ಲ ಎನ್ನುವುದನ್ನು ಕೂಡಾ ಫಲಿತಾಂಶ ತೋರಿಸುತ್ತಿದೆ. ಆದ್ದರಿಂದ ಈ ಫಲಿತಾಂಶ ಕೇವಲ ನೆಗೆಟಿವ್ ವೋಟ್ ಅಲ್ಲ, ಇದು ಪಾಸಿಟಿವ್ ವೋಟ್ ಕೂಡಾ ಹೌದು ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಧರ್ಮ ವಿಭಜನೆ ಮತ್ತು ಧರ್ಮ ದ್ವೇಷದ ಹಿಂದುತ್ವದ ರಾಜಕೀಯವನ್ನು ರಾಜ್ಯದ ಮತದಾರರು ತಿರಸ್ಕರಿಸಿದ್ದಾರೆ. ರಾಜ್ಯದ ಮತದಾರರು ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಬಂಧುತ್ವದ ರಾಜಕೀಯವನ್ನು ಪುರಸ್ಕರಿಸಿದ್ದಾರೆ. ಈ ಫಲಿತಾಂಶ ಕೇವಲ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುದ್ವೇಷದ ವಿರುದ್ಧದ ಜನಮತ ಮಾತ್ರ ಅಲ್ಲ, ಇದು ಜೆಡಿಎಸ್ ಪಕ್ಷದ ಸ್ವಾರ್ಥ ಮತ್ತು ಅವಕಾಶವಾದಿ ರಾಜಕಾರಣದ ವಿರುದ್ಧದ ಜನಮತ ಕೂಡಾ ಹೌದು ಎಂದು ತಿಳಿಸಿದ್ದಾರೆ.

See also  ದೇಶಕ್ಕಾಗಿ ಮಡಿದ, ದುಡಿ(ದ)ಯುತ್ತಿರುವ ಸೈನಿಕರಿಗೊಂದು ಸಲಾಮ್!

ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ. ನಮ್ಮ ಪಕ್ಷದ ಕಾರ್ಯಕರ್ತರು ಸಂಯಮದಿಂದ ವಿಜಯೋತ್ಸವವನ್ನು ಆಚರಿಸಬೇಕು. ಎದುರಾಳಿಗಳು ಸೋಲಿನ ಹತಾಶೆಯಿಂದ ಪ್ರಚೋದಿಸಿದರೂ ನಮ್ಮ ಕಾರ್ಯಕರ್ತರು ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು