ಜಕಾರ್ತ : ಕೊರೋನಾ ಸೋಂಕಿನ ರೂಪಾಂತರ ತಳಿಯ ಸೋಂಕು ಇಂಡೋನೇಷ್ಯಾದಲ್ಲಿ ವೇಗವಾಗಿ ಹರಡಲಾರಂಬಿಸಿದೆ. ಇಂಡೋನೇಷ್ಯಾದ ಜನರು ಡೆಲ್ಟಾ ಸೋಂಕಿನಿಂದ ತತ್ತರಿಸಿದ್ದು, ವೈದ್ಯಕೀಯ ಬಿಕ್ಕಟ್ಟು ಏರ್ಪಟ್ಟಿದೆ. ಅತಿ ಹೆಚ್ಚಿನ ಜನರು ತೀವ್ರ ಸ್ವರೂಪದ ಡೆಲ್ಟಾ ಸೋಂಕಿಗೆ ಒಳಗಾಗುತ್ತಿದ್ದು, ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದೆ. ಇದರಿಂದ ಆಕ್ಸಿಜನ್, ಬೆಡ್ ಸಮಸ್ಯ ಉದ್ಭವಿಸಿದ್ದು, ಜನರು ಕಂಗಾಲಾಗಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದ್ವೀಪ ರಾಷ್ಟ್ರದ ಆರೋಗ್ಯ ಸಚಿವರು, ಡೆಲ್ಟಾ ರೂಪಾಂತರ ತಳಿ ಅತಿ ವೇಗವಾಗಿ ಹರಡುತ್ತಿದ್ದು, ಇದನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಕಳೆದ ಹತ್ತು ದಿನಗಳಿಂದ ಇಂಡೋನೇಷ್ಯಾದಲ್ಲಿ ಸೋಂಕಿರತ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಗಳವಾರ ಒಂದೇ ದಿನದಲ್ಲಿ 47, 988 ಹೊಸ ಪ್ರಕರಣಗಳು ದಾಖಲಾಗಿದೆ. ಸೋಂಕು ನಿವಾರಣೆಗೆ ಈಗಾಗಲೇ ಕಂಟೈನ್ಮೆಟ್ ಜೋನ್ಗಳನ್ನು ರಚಿಸಲಾಗಿದೆ ಆದರೂ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿಲ್ಲ. ಇದರಿಂದ ಸೋಂಕು ನಿಯಂತ್ರಣಕ್ಕೆ ತರಲು ಇಂಡೋನೇಷ್ಯಾ ಪರಿತಪಿಸುತ್ತಿದೆ. ಭಾರತದಲ್ಲಿ ಮೊದಲು ಕಂಡು ಬಂದ ಈ ಡೆಲ್ಟಾ ಸೋಂಕು ಜಾವಾ ದ್ವೀಪದ ಹೊರ ಪ್ರದೇಶದಲ್ಲಿ ಕಂಡು ಬಂದಿದೆ. ಇಲ್ಲಿನ 11 ಪ್ರದೇಶಗಳಲ್ಲಿ ಈ ರೂಪಾಂತರಿ ಸೋಂಕು ಕಂಡು ಬಂದಿದೆ ಎಂದು ಇಂಡೋನೇಷ್ಯಾ ಆರೋಗ್ಯ ಸಚಿವ ಬುಡಿ ಗುನಾಡಿ ಸಾದಿಕಿನ್ ತಿಳಿಸಿದ್ದಾರೆ.
ಸುಮಾತ್ರಾ ಪಪುವಾ ಮತ್ತು ಇಂಡೋಬೇಷ್ಯಾದ ಬೊರ್ನಿಯೊ ಅದರಲ್ಲೂ ಪಶ್ಚಿಮ ಪಪುವಾದಲ್ಲಿ ಸೋಂಕಿನ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದು, ಬೆಡ್ ಸಮಸ್ಯೆ ಉದ್ಭವಿಸಿದೆ. ಈ ಸೋಂಕು ನಿರ್ವಹಣೆಗೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಆರೋಗ್ಯ ವ್ಯವಸ್ಥೆ ಬಿಕ್ಕಟ್ಟು ಎದುರಾದರೆ ನಮ್ಮ ಸಾಮರ್ಥ್ಯ ಜಕಾರ್ತಾಗಿಂತ ಕೆಳಗೆ ಇಳಿಯಲಿದೆ ಎಂದು ಆರೋಗ್ಯ ಸಚಿವರು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಪೂರ್ವ ನುಸಾ ತೆಂಗಾರದಲ್ಲಿ ಕಳೆದ ಮೂರು ದಿನಗಳಲ್ಲಿ ಸೋಂಕು ದ್ವಿಗುಣಗೊಂಡಿದೆ. ಸುಮಾತ್ರಾದ ಲ್ಯಾಂಪಂಗ್ನಲ್ಲಿ ಶೇ 86 ರಷ್ಟು ಹಾಸಿಗೆ ಭರ್ತಿಯಾಗಿವೆ. ದೇಶದಲ್ಲಿ ಸೋಂಕಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ರೋಗಶಾಸ್ತ್ರಜ್ಞ ಇಸ್ಮೆನ್ ಮುಕ್ತಾರ್ ತಿಳಿಸಿದ್ದಾರೆ.
ಜನರ ಜೀವ ಉಳಿಸಲು ಆರೋಗ್ಯ ಸೌಲಭ್ಯಗಳು ತಕ್ಷಣಕ್ಕೆ ಬೇಕಾಗಿದೆ. ಆದರೆ. ಇದಕ್ಕಿಂತ ಮುಖ್ಯವಾಗಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದರು.ಜಾವಾದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯಲು ಜನರು ಹೆಣಗಾಡುತ್ತಿದ್ದಾರೆ. ಜೂನ್ ನಿಂದ 550 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ . ಭಾರತದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಉಂಟಾದಂತಹ ವೈದ್ಯಕೀಯ ಬಿಕ್ಕಟ್ಟಿನ ಪರಿಸ್ಥಿತಿ ದೇಶದಲ್ಲಿ ಕೂಡ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಆಕ್ಸಿಜನ್ ಪೂರೈಕೆ, ಬೆಡ್ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೇ ಹಿನ್ನಲೆ ಸರ್ಕಾರ ಇಲ್ಲಿ ವೈದ್ಯರ ನೇಮಕಕ್ಕೆ ಮುಂದಾಗಿದ್ದು, ಸಿಂಗಾಪೂರದಿಂದ ಆಕ್ಸಿಜನ್ ಪೂರೈಕೆಯನ್ನು ಮಾಡಿಕೊಳ್ಳಲಾಗಿದ್ದು, ಎಲ್ಲಾ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಲಾಗಿದೆ.
ಇಂಡೋನೇಷ್ಯಾದಲ್ಲಿ ತೀವ್ರಗೊಂಡ ಡೆಲ್ಟಾ ಸೋಂಕು ; ಆಕ್ಸಿಜನ್ ಬೆಡ್ ಕೊರತೆ

Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.