
ವಾಷಿಂಗ್ಟನ್ : ಪಾಕಿಸ್ತಾನಕ್ಕೆ ಭದ್ರತಾ ನೆರವು ಸ್ಥಗಿತೊಳಿಸುವ ಬಗ್ಗೆ ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿದ್ದ ತೀರ್ಮಾನವನ್ನೇ ಮುಂದುವರಿಸಲು ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಂಟಗಾನ್ ಹೇಳಿದೆ.
2018ರ ಜನವರಿಯಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಟ್ರಂಪ್ ಅವರು ಪಾಕಿಸ್ತಾನಕ್ಕೆ ನೀಡುವ ಎಲ್ಲ ರೀತಿಯ ಭದ್ರತಾ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರು. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಇಸ್ಲಾಮಾಬಾದ್ ವಹಿಸುತ್ತಿರುವ ಪಾತ್ರ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದರು. ’ಪಾಕಿಸ್ತಾನಕ್ಕೆ ನೀಡುವ ಭದ್ರತಾ ನೆರವು ಈಗ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಈ ನಿಲುವು ಬದಲಾಗುತ್ತದೆಯೇ ಎಂಬ ಊಹಾಪೋಹಗಳಿಗೆ ನಾನು ಉತ್ತರಿಸಲು ಆಗುವುದಿಲ್ಲ‘ ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ’ಈ ಹಿಂದಿನ ಟ್ರಂಪ್ ಆಡಳಿತದ ನೀತಿಯನ್ನು ಬೈಡನ್ ಆಡಳಿತವು ಪರಿಷ್ಕರಿಸುತ್ತದೆಯೇ, ಅದರಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ ಅಥವಾ ಪಾಕಿಸ್ತಾನದೊಂದಿಗೆ ಮಾತನಾಡುವಾಗ ಈ ವಿಷಯಗಳು ಪ್ರಸ್ತಾಪವಾದರೆ ನಿಮ್ಮ ನಿಲುವೇನು?‘ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
’ಇದಕ್ಕೂ ಮೊದಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಕ್ವಾಮರ್ ಜಾವೇದ್ ಬಾಜ್ವಾ ಜತೆ ಪ್ರಾದೇಶಿಕ ಆಸಕ್ತಿಗಳು ಮತ್ತು ಉದ್ದೇಶಗಳನ್ನು ಹಂಚಿಕೊಳ್ಳುವ ಕುರಿತು ಚರ್ಚೆ ನಡೆಸಿದರು‘ ಎಂದು ಕಿರ್ಬಿ ಹೇಳಿದರು.