ಯುನೈಟೆಡ್ ಸ್ಟೇಟ್ಸ್‌ನ 37 ರಾಜ್ಯಗಳಲ್ಲಿ ಈರುಳ್ಳಿಯಿಂದ ಹರಡುವ ಹೊಸ ಸೋಂಕು ಕಾಣಿಸಿದೆ. ಈಗಾಗಲೇ 650 ಮಂದಿಗೆ ಸಾಲ್ಮೊನೆಲ್ಲಾ ಬಾಧಿಸಿದ್ದು, ಯುಎಸ್‌ಎ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಹೊಂದಿರದ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಬಳಕೆ ಮಾಡದಂತೆ ಸೂಚಿಸಿವೆ.
ಮೆಕ್ಸಿಕೋದ ಚಿಹುವಾದಿಂದ ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಸೋಂಕು ಕಾಣಿಸಿದೆ. ಈ ಈರುಳ್ಳಿಯನ್ನೇ ಯುಎಸ್‌ನಾದ್ಯಂತ ವಿತರಿಸಲಾಗಿದೆ ಎಂದು ಯುಎಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮಂದಿಯಲ್ಲಿ ಶೇ.75ರಷ್ಟು ಜನರು ಅನಾರೋಗ್ಯಕ್ಕೆ ಒಳಗಾಗುವ ಮುನ್ನ ಹಸಿ ಈರುಳ್ಳಿಯನ್ನು ಸೇವಿಸಿದ್ದಾರೆ. ಸಾವಿನ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸಿಡಿಸಿ ಹೇಳಿದೆ.
ಈರುಳ್ಳಿಯನ್ನು ತಿಂಗಳುಗಟ್ಟಲೆ ಸ್ಟೋರ್ ಮಾಡಲು ಅವಕಾಶವಿದ್ದು, ಇದೇ ಈರುಳ್ಳಿ ಇನ್ನೂ ಎಷ್ಟೋ ಜನದ ಮನೆಯಲ್ಲಿ, ಅಂಗಡಿಯಲ್ಲಿ ಇರುವ ಸಾಧ್ಯತೆ ಇದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಲ್ಮೊನೆಲ್ಲಾ ಸೋಂಕು ಬ್ಯಾಕ್ಟೀರಿಯಾದಿಂದ ಹರಡುವುದಾಗಿದ್ದು, ಟೈಫಾಯಿಡ್ ಅಥವಾ ಪ್ಯಾರಾಟೈಫಾಯಿಡ್ ಜ್ವರಕ್ಕೂ ಕಾರಣವಾಗಬಹುದು. ಈ ಬಾಧೆ ಕಾಣಿಸಿದವರಿಗೆ ಜ್ವರ,ಬೇಧಿ ಮತ್ತು ಹೊಟ್ಟೆ ನೋವು ಕಾಣಿಸುತ್ತದೆ. ಕಲುಷಿತ ಆಹಾರ ತಿಂದ ಸುಮಾರು ಆರು ಗಂಟೆಗಳ ನಂತರ ಲಕ್ಷಣಗಳು ಕಾಣಿಸುತ್ತವೆ. ಬ್ಯಾಕ್ಟೀರಿಯಾದ ಕೆಲ ತಳಿಗಳು ರಕ್ತ, ಮೂಳೆಗಳು, ಕೀಲುಗಳು ಅಥವಾ ನರವ್ಯೂಹಕ್ಕೆ ಸಮಸ್ಯೆ ತಂದೊಡ್ಡಬಹುದು.