ಮುಂದಿನ 48 ಗಂಟೆಗಳಲ್ಲಿ ಚೆನ್ನೈನಲ್ಲಿ ಭಾರೀ ಮಳೆ ಸಾಧ್ಯತೆ

ಮುಂದಿನ 48 ಗಂಟೆಗಳಲ್ಲಿ ಚೆನ್ನೈನಲ್ಲಿ ಭಾರೀ ಮಳೆ ಸಾಧ್ಯತೆ

Dec 07, 2015 11:44:28 AM (IST)

ಚೆನ್ನೈ: ಜಲಪ್ರಳಯಕ್ಕೆ ತತ್ತರಿಸಿ ಹೋಗಿರುವ ತಮಿಳುನಾಡಿನಲ್ಲಿ ಮತ್ತೆ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಶ್ರೀಲಂಕಾ ಬಳಿ ಶನಿವಾರ ವಾಯುಭಾರ ಕುಸಿತ ಉಂಟಾಗಿತ್ತು. ಅದು ಈಗ ತಮಿಳುನಾಡಿನತ್ತ ಬರುತ್ತಿದೆ.ಇದಲ್ಲದೆ ಭಾನುವಾರ ತಮಿಳುನಾಡು ಕರಾವಳಿಯಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಫ‌ಲವಾಗಿ ತಮಿಳುನಾಡಿನ ಕರಾವಳಿ- ಒಳನಾಡು ಹಾಗೂ ಪುದುಚೇರಿಯಲ್ಲಿ ಮುಂದಿನ 24ರಿಂದ 48 ತಾಸುಗಳವರೆಗೆ ಧಾರಾಕಾರ ಮಳೆಯಾಗಲಿದೆ.

ಈಗಾಗಲೇ ಪ್ರವಾಹದಿಂದ ತತ್ತರಿಸಿಹೋಗಿರುವ ತಮಿಳುನಾಡಿನ ಕರಾವಳಿ ಮತ್ತು ಒಳನಾಡಿನಲ್ಲಿ ಹಾಗೂ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗಲಿದ್ದು, ಕಡಲೂರಿನಲ್ಲಿ ಮಳೆಯ ತೀವ್ರತೆ ಇನ್ನಷ್ಟು ತೀವ್ರವಾಗಿರಲಿದೆ ಎಂದೂ ಇಲಾಖೆ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ.  ಡಿಎಚ್‍ಎಫ್ ಎಲ್, ಎಸ್‍ಬಿಐ, ಐಸಿಐಸಿಐ ಬ್ಯಾಂಕ್, ಎಚ್‍ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳು ತಮಿಳುನಾಡಿನ ಗ್ರಾಹಕರ ಇಎಂಐ ಪಾವತಿ ವಿಳಂಬವಾಗಿದ್ದಕ್ಕೆ ವಿಧಿಸಲಾಗುವ ದಂಡವನ್ನು ಮನ್ನಾ ಮಾಡಿವೆ. ಜನರ ಸಂಕಷ್ಟ ಅರಿತು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಸಂಸ್ಥೆಗಳು ತಿಳಿಸಿವೆ.

ರಸ್ತೆಗಳಲ್ಲಿ ತುಂಬಿದ್ದ ನೀರು ನಿಧಾನಕ್ಕೆ ಖಾಲಿಯಾಗುತ್ತಿದ್ದರೂ ಚೆನ್ನೈ ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಭಾನುವಾರವೂ ಮಳೆ ಸುರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡು ಸರ್ಕಾರ ಚೆನ್ನೈ, ಕಾಂಚಿಪುರಂ ಹಾಗೂ ತಿರುವಳ್ಳುವರ್‌ ಜಿಲ್ಲೆಗಳಲ್ಲಿ ಸೋಮವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ನಡುವೆ, ಸಾವಿನ ಸಂಖ್ಯೆ 450ಕ್ಕೇರಿಕೆಯಾಗಿದೆ.

ಪ್ರವಾಹಪೀಡಿತ ಪ್ರದೇಶಗಳ ಜನರ ಕಷ್ಟಕ್ಕೆ ದನಿಯಾಗುವ ಸಲುವಾಗಿ ದಕ್ಷಿಣ ಭಾರತದ ಸಿನಿಮಾ ನಟರು ಒಂದಾಗಿದ್ದಾರೆ. ರಾಣಾ ದಗ್ಗುಬಾಟಿ, ಧನುಷ್, ಅಲ್ಲಾರಿ ನರೇಶ್, ಅಲ್ಲು ಅರ್ಜುನ್, ಸಿದ್ಧಾರ್ಥ್ ಸೇರಿದಂತೆ ಅನೇಕ ನಟರು ಪರಸ್ಪರ ಕೈಜೋಡಿಸಿದ್ದು, ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.