ಮಗಳನ್ನೇ ಸೊಸೆಯಾಗಿ ಕರೆತಂದ ತಾಯಿ

ಮಗಳನ್ನೇ ಸೊಸೆಯಾಗಿ ಕರೆತಂದ ತಾಯಿ

Jayashree Aryapu   ¦    Apr 07, 2021 05:52:37 PM (IST)
ಮಗಳನ್ನೇ ಸೊಸೆಯಾಗಿ ಕರೆತಂದ ತಾಯಿ

ಬೀಜಿಂಗ್​: ಅಣ್ಣ- ತಂಗಿ ಜತೆಯಾಗಿ ಬೆಳೆಯುವ ಮಕ್ಕಳಿಗೆ ದಾಂಪತ್ಯ ಜೀವನ ಕೊಡುವುದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಒಪ್ಪಿಗೆಯಾಗದ ಮಾತು. ಸುಮಾರು ವರ್ಷಗಳ ಹಿಂದೆಯೇ ಮಗಳನ್ನು ಕಳೆದುಕೊಂಡಿದ್ದ ತಾಯಿಯೊಬ್ಬಳಿಗೆ ಮಗನ ಮದುವೆಯಲ್ಲಿ ಮಗಳು ವಾಪಾಸು ಸಿಕ್ಕಿರುವ ಘಟನೆ ಚೀನಾದಲ್ಲಿ ನಡೆದಿದೆ.

ಆದರೆ ಮಗಳೇ ವಧುವಾಗಿದ್ದದ್ದು, ತಾಯಿಗೆ ತೀರಾ ಸಂಕಷ್ಟದ ಪರಿಸ್ಥಿತಿ ಉಂಟು ಮಾಡಿತ್ತು ಎಂದು ವರದಿಯಾಗಿದೆ.

ಮಾರ್ಚ್​ 31ರಂದು ಈ ಮದುವೆ ಸಂಭ್ರಮ ಶುರುವಾಗಿತ್ತು. ಮಂಟಪವೇರಿದ ಮಗನಿಗೆ ಎದುರಾಗಿ ನಿಂತಿದ್ದ ವಧುವಿನಲ್ಲಿ, ವರನ ತಾಯಿ ಬರ್ತ್​ಮಾರ್ಕ್​ ಒಂದನ್ನು ಗಮನಿಸಿದ್ದಾರೆ. ಸಂಶಯದಿಂದ ತಕ್ಷಣ ವಧುವಿನ ತಾಯಿ ತಂದೆಯ ಬಳಿ ಹೋಗಿ ವಿಚಾರಣೆ ಮಾಡಿದ್ದರು.

ಈ ಸಂದರ್ಭ, 20 ವರ್ಷಗಳ ಹಿಂದೆ ಹೆಣ್ಣು ಮಗುವೊಂದು ರಸ್ತೆ ಬದಿಯಲ್ಲಿ ಸಿಕ್ಕಿತ್ತು ಎಂದು ಆಕೆಯ ಹೆತ್ತವರು ನಿಜಾಂಶವನ್ನು ಹೊರಗಿಟ್ಟಿದ್ದಾರೆ. ತಾನು ಕಳೆದುಕೊಂಡಿದ್ದ ಹೆಣ್ಣು ಮಗುವೇ ಎನ್ನುವುದು ವರನ ತಾಯಿಗೆ ಅರಿವಾಗಿತ್ತು.

20 ವರ್ಷವಾದರೂ ತನ್ನ ನಿಜವಾದ ತಂದೆ ತಾಯಿಯ ಬಗ್ಗೆ ಅರಿವೇ ಇಲ್ಲದೆ ಬೆಳೆದಿದ್ದ ವಧುವಿಗೆ ವಿಚಾರ ತಿಳಿದು ಸಂತೋಷವಾಗಿತ್ತು. ಆದರೆ ತನ್ನದೇ ಅಣ್ಣನೊಂದಿಗೆ ವಿವಾಹವಾಗುತ್ತಿರುವ ಸಂಗತಿ ಬೇಸರ ತರಿಸಿದೆ.

ಆದರೆ ಸ್ವಲ್ಪ ಹೊತ್ತಿನಲ್ಲಿ ಈ ವಿಚಾರಕ್ಕೂ ಬ್ರೇಕ್​ ಬಿದ್ದಿದೆ.
ಮಗಳನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬ ಎಲ್ಲೆಡೆ ಮಗಳಿಗಾಗಿ ಹುಡುಕಾಡಿದ್ದರಂತೆ. ಎಲ್ಲಿಯೂ ಆಕೆ ಸಿಗದೇ ಹೋದಾಗ ಬೇರೊಬ್ಬ ಗಂಡು ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಮಗನಂತೆ ಸಾಕಲಾರಂಭಿದರಂತೆ.
ಈಗ ಅದೇ ಮಗ ಮದುವೆ ಮಂಟಪದಲ್ಲಿದ್ದ. ಹಾಗಾಗಿ ವಧು ವರರಿಬ್ಬರು ಒಂದೇ ತಾಯಿಯ ಮಕ್ಕಳಲ್ಲ ಎನ್ನುವ ವಿಚಾರ ಸ್ಪಷ್ಟವಾಗಿದೆ.
ಈ ಘಟನೆ ನಡೆದ ನಂತರ ವಿಶೇಷ ಖುಷಿಯಲ್ಲಿ ಮದುವೆ ಮಾಡಲಾಗಿದೆ. ತನ್ನ ಮಗಳನ್ನು ತಾಯಿ ಸೊಸೆಯ ರೂಪದಲ್ಲಿ ಮನೆ ತುಂಬಿಸಿಕೊಂಡಿದ್ದಾಳೆ.