ಚೆನ್ನೈ: ತಮಿಳುನಾಡಿನಲ್ಲಿ ಸುರಿದ ಧಾರಾಕಾರ ಮಳೆಗೆ ಚೆನ್ನೈನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಒಂದೇ ದಿನದಲ್ಲೇ ಸುಮಾರು 13ರಿಂದ 17 ಸೆಂ.ಮೀಟನಷ್ಟು ಮಳೆಯಾಗಿದ್ದು, ಚೆನ್ನೈ ತಗ್ಗು ಪ್ರದೇಶಗಳಲ್ಲಿರುವ ಸ್ಲಂಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸ್ಲಂಗಳಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇತ್ತ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಜಿಲ್ಲಾಡಳಿತ ಮುಂದುವರೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳನ್ನು ಚೆನ್ನೈಗೆ ರವಾನಿಸಲಾಗಿದೆ.
ಸೈದಾಪೇಟ್ ನಲ್ಲಿ ಬಸ್ ವೊಂದು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಕೂವ್ವಂ, ಅಡಿಯಾರ್ ಸೇರಿದಂತೆ ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇತ್ತ ಮಳೆಯಿಂದಾಗಿ ತಮಿಳುನಾಡಿನಲ್ಲಿ ಸಾವಿಗೀಡಾದವರ ಸಂಖ್ಯೆ 60ಕ್ಕೇರಿದ್ದು, ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಮಳೆ ಕಾರಣದಿಂದಾಗಿ ಜನ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ. ನುಂಗಾಂಬಕ್ಕಮ್, ಮೀನಾಂಬಕ್ಕಮ್, ತಿರುತ್ತಣಿ, ವೆಲ್ಲೂರ್ ಮತ್ತು ಕುಡಲೂರ್ ನಲ್ಲಿ ಭಾರಿ ಮಳೆಯಾಗಿದ್ದು, ರೈಲು ಹಳಿಗಳ ಮೇಲೆ ನೀರು ನಿಂತ ಪರಿಣಾಮ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಮತ್ತಷ್ಟು ಮಳೆಯಾಗುವ ಕುರಿತು ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಮತ್ತಷ್ಟು ಭೀತಿ ಉಂಟುಮಾಡಿದೆ.