ಮುಂಬೈ: 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪೊಲೀಸರ ಶಂಕೆಯ ಮೇರೆಗೆ ನಟ ಸಲ್ಮಾನ್ ಖಾನ್ ರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ನಟ ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಪ್ರಕರಣದ ಕುರಿತ ತೀರ್ಪು ಓದಿದ ಬಾಂಬೆ ಹೈಕೋರ್ಟ್ ಜಡ್ಜ್ ನ್ಯಾ.ಎ.ಆರ್.ಜೋಶಿ, ಸಲ್ಮಾನ್ ಖಾನ್ ಕುಡಿದು ಕಾರು ಚಲಾಯಿಸುತ್ತಿದ್ದರು ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರವಿಲ್ಲ. ಅನುಮಾನದ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಅವರನ್ನು ನಿರ್ದೋಷಿ ಎಂದು ಘೋಷಿಸುವುದಾಗಿ ಹೇಳಿದರು.
2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದರು. ಕೆಳಹಂತದ ನ್ಯಾಯಾಲಯದ(ಮುಂಬೈ ಸೆಷನ್ ಕೋರ್ಟ್) ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ತೀರ್ಪನ್ನು ಬರೆಸುವ ಪ್ರಕ್ರಿಯೆ ವೇಳೆ ನ್ಯಾ.ಎ.ಆರ್.ಜೋಷಿ ಅವರು, ಖಾನ್ ಮಾಜಿ ಅಂಗರಕ್ಷಕ ರವೀಂದ್ರ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಖಾನ್ ಖುಲಾಸೆಗೊಳ್ಳುವ ಸುಳಿವನ್ನು ನೀಡಿದ್ದರು. ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟೀಲ್ ಪೊಲೀಸರ ಬಳಿ ಒಂದು ಹೇಳಿಕೆ ಮತ್ತು ನ್ಯಾಯಾಧೀಶರ ಬಳಿ ಒಂದು ರೀತಿಯ ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ಕಾರಣರಾಗಿದ್ದರು. ಹೀಗಾಗಿ ರವೀಂದ್ರ ಪಾಟೀಲ್ ರ ಹೇಳಿಕೆಯ ಆಧಾರದ ಮೇಲೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.