ಹೊಸದಿಲ್ಲಿ: ದೆಹಲಿಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ಪೂರ್ಣಗೊಳಿಸಿರುವ ಬಾಲಾಪರಾಧಿ ರಹಸ್ಯ ಸ್ಥಳವೊಂದರಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಮತ್ತು ಕೇಂದ್ರ ಸರಕಾರ ಮಾಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಷ್ಟೇ ತಿರಸ್ಕರಿಸಿತ್ತು. ಹೀಗಾಗಿ ನಿರ್ಭಯ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದ ಬಾಲಾಪರಾಧಿ ಬಿಡುಗಡೆಗೆ ಎದುರಿದ್ದ ಅಡ್ಡಿಗಳು ನಿವಾರಣೆಯಾಗಿದ್ದವು. ಆದರೆ ಬಾಲಾಪರಾಧಿ ಬಿಡುಗಡೆಗೆ ರವಿವಾರವೂ ಅವಕಾಶ ಇದೆ ಎನ್ನಲಾಗಿದೆ. ಈ ಸಂಬಂಧ ದಿಲ್ಲಿ ಮಹಿಳಾ ಆಯೋಗ ಮತ್ತು ದಿಲ್ಲಿ ಸರಕಾರ ತಮ್ಮ ಕೊನೆಯ ಯತ್ನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಆಯೋಗ ಅಥವಾ ದಿಲ್ಲಿ ಸರಕಾರ ಸುಪ್ರೀಂಕೋರ್ಟ್ಗೆ ಮೊರೆ ಹೋಗಿ ಬಿಡುಗಡೆಗೆ ತಡೆ ತಂದರೆ, ಕಡೆಯ ಹಂತದಲ್ಲಿ ಬಿಡುಗಡೆ ಆಗದೆಯೂ ಇರಬಹುದು. ಇಲ್ಲದೇ ಹೋದಲ್ಲಿ ರವಿವಾರ ಯಾವುದೇ ಸಮಯದಲ್ಲಿ ಆತ ನಿಗೂಢ ಸ್ಥಳವೊಂದರಿಂದ ಬಿಡುಗಡೆಯಾಗಲಿದ್ದಾನೆ ಎನ್ನಲಾಗಿದೆ.
ದೆಹಲಿಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ಪೂರ್ಣಗೊಳಿಸಿರುವ ಬಾಲಾಪರಾಧಿ ಬಿಡುಗಡೆಯನ್ನು ವಿರೋಧಿಸಿ ನಿರ್ಭಯಾ ಪೋಷಕರು ಭಾನುವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ ನಿರ್ಭಯಾಳ ಪೋಷಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಾಲಾಪರಾಧಿ ಬಿಡುಗಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅತ್ಯಾಚಾರಕ್ಕೊಳಗಾದ ಯುವತಿಯ ಪೋಷಕರು ಮಾಧ್ಯಮಗಳ ಮುಂದೆ ತಮ್ಮ ನೋವು ಹೇಳಿಕೊಂಡಿದ್ದು, ಜನಪ್ರತಿನಿಧಿಗಳ ಮಗಳ ಮೇಲೆ ಅತ್ಯಾಚಾರವಾಗಿದ್ದರೆ ತೀರ್ಪು ಬೇರೆಯದ್ದೇ ಆಗುತ್ತಿತ್ತು. ಕಳೆದ ಮೂರು ವರ್ಷಗಳಿಂದಲೂ ನಾವು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಾ ಸೋತು ಹೋಗಿದ್ದೇವೆ.ಆದರೆ ನಮ್ಮ ಪ್ರತಿಭಟನೆಗೆ ನ್ಯಾಯ ಸಿಗಲಿಲ್ಲ ಎಂದಿದ್ದಾರೆ.