ಇಂಪಾಲ: ಈಶಾನ್ಯ ರಾಜ್ಯಗಳಾದ ಮಣಿಪುರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 6 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಮಣಿಪುರ, ನಾಗಲ್ಯಾಂಡ್. ಅರುಣಾಚಲ ಪ್ರದೇಶ, ತ್ರಿಪುರಾ, ಜಾರ್ಖಂಡ್ ಸೇರಿ ಒಟ್ಟು 11 ರಾಜ್ಯಗಳಲ್ಲಿ ಭೂ ಕಂಪನ ಸಂಭವಿಸಿದೆ. ಇಂಫಾಲದಿಂದ 33 ಕಿಲೋ ಮೀಟರ್ ದೂರದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.7ರಷ್ಟು ದಾಖಲಾಗಿದೆ. ಇನ್ನು ಭೂಕಂಪನದಿಂದಾಗಿ ಇಂಪಾಲದಲ್ಲಿ ಹಲವು ಕಟ್ಟಡಗಳು ಕುಸಿದುಬಿದ್ದಿದ್ದು ಆರು ಮಂದಿ ಮೃತಪಟ್ಟಿದ್ದು ನೂರಾರು ಜನರು ಗಾಯಗೊಂಡಿದ್ದಾರೆ.
ನಸುಕಿನ ಸುಮಾರು 4.35ರ ಹೊತ್ತಿಗೆ ಭೂಕಂಪ ಸಂಭವಿಸಿದಾಗ ಅನೇಕ ಕಟ್ಟಡಗಳು ಹಾನಿಗೀಡಾಗಿ ಜನರು ಭಯ ಭೀತರಾಗಿ ತಮ್ಮ ಮನೆ, ಕಟ್ಟಡಗಳಿಂದ ಹೊರಗೋಡಿ ಬಂದರು. ಭೂಕಂಪದ ಕೇಂದ್ರ ಬಿಂದು ಮಣಿಪುರದ ತಮೇಂಗ್ಲಾಂಗ್ ಜಿಲ್ಲೆಯಾಗಿತ್ತು ಮತ್ತು ಅದು ಸುಮಾರು ಹದಿನೇಳು ಕಿ.ಮೀ. ನೆಲದಾಳದಲ್ಲಿ ಕೇಂದ್ರೀಕೃತವಾಗಿತ್ತು.
ಭೂಕಂಪದ ಪರಿಣಾಮವಾಗಿ ಮಣಿಪುರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಜನರು ಬಯಲಲ್ಲೇ ಆಸರೆ ಪಡೆದಿದ್ದಾರೆ. ಗುವಾಹಟಿಯಲ್ಲಿ ಸುಮಾರು 20 ಮಂದಿ ಭೂಕಂಪ ಸಂಬಂಧಿತ ಅನಾಹುತಗಳಲ್ಲಿ ಗಾಯಗೊಂಡಿದ್ದಾರೆ. ಅಸ್ಸಾಂನಲ್ಲಿ ಒಟ್ಟಾರೆಯಾಗಿ ಸುಮಾರು 30 ಕಟ್ಟಡಗಳು ಹಾನಿಗೊಂಡಿವೆ ಎಂದು ಅಸ್ಸಾಂ ಆಯುಕ್ತ ಹಾಗೂ ಕಾರ್ಯದರ್ಶಿ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ.