ಹೊಸದಿಲ್ಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಅವರು ಗುರುವಾರ ಬೆಳಗ್ಗೆ ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರಾತ್ರಿ ಅವರ ಆರೋಗ್ಯದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಮೊದಲ ಬಾರಿ 2002 ರಿಂದ 2005 ರವರೆಗೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಜಮ್ಮುಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿದ್ದ ಸಯೀದ್ ಅವರು ಪಕ್ಷ ತ್ಯಜಿಸಿ ವಿ.ಪಿ.ಸಿಂಗ್ ಅವರ ಜನ ಮೋರ್ಚಾ ಸೇರಿದ್ದರು. 1989 ಡಿಸೆಂಬರ್ 2 ರಿಂದ 1990 ನವೆಂಬರ್ 10 ರ ವರೆಗೆ ವಿ.ಪಿ.ಸಿಂಗ್ ಅವರ ಸಂಪುಟದಲ್ಲಿ ಕೇಂದ್ರ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಭಾರತದ ಮೊದಲ ಮುಸ್ಲಿಂ ಗೃಹ ಸಚಿವರು ಎಂಬ ಹೆಗ್ಗಳಿಕೆಯೂ ಮುಫ್ತಿ ಅವರದ್ದಾಗಿದೆ.