ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
51 ವರ್ಷದ ನಟಿ ಕಲ್ಪನಾ ರಂಜನಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೆಲುಗು ಚಿತ್ರವೊಂದರ ಚಿತ್ರೀಕರಣದ ನಿಮಿತ್ತ ಹೈದರಾಬಾದಿನ ಖಾಸಗಿ ಹೊಟೆಲ್ ನಲ್ಲಿ ನಟಿ ಕಲ್ಪನಾ ಅವರು ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದಾಗ ಕಲ್ಪನಾ ಅವರು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಾಬರಿಯಾದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
1983ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲ್ಪನಾ ಅವರು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕಲ್ಪನಾ ಅವರು 2012ರಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಬಹುತೇಕ ಹಾಸ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಕಲ್ಪನಾ ಅವರು ಕನ್ನಡದಲ್ಲಿ ಅಭಿನಯಿಸಿದ್ದರು.