ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯಲ್ಲಿ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಜೀವಂತವಾಗಿ ಪತ್ತೆಯಾಗಿದ್ದಾರೆ.
ಆರು ದಿನಗಳ ಹಿಂದೆ ಭಾರೀ ಹಿಮಪಾತದಲ್ಲಿ ಮುಳುಗಿ ಹೋದ ಮದ್ರಾಸ್ ರೆಜಿಮೆಂಟ್ನ 10 ಯೋಧರ ಪೈಕಿ ಕರ್ನಾಟಕದ ಧಾರವಾಡ ಮೂಲದ ಯೋಧ, ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಪವಾಡ ಸದೃಶವಾಗಿ ಬದುಕಿದ್ದಾರೆ. 25 ಅಡಿ ಆಳದ ಹಿಮದಿಂದ ಹನುಮಂತಪ್ಪ ಅವರನ್ನು ರಕ್ಷಿಸಲಾಗಿದೆ. ಕೊಪ್ಪದ್ ಅವರನ್ನು ರಕ್ಷಣಾ ತಂಡ ಸೋಮವಾರ ರಾತ್ರಿ ಜೀವಂತವಾಗಿ ಹಿಮರಾಶಿಯಿಂದ ಹೊರತೆಗೆದಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಗಿದ್ದು ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
9 ಸೈನಿಕರೊಂದಿಗೆ ನಾಪತ್ತೆಯಾಗಿದ್ದ ಹನಮಂತಪ್ಪ ನಾಯಕ ಸತತ 6 ದಿನಗಳ ಮಂಜಿನಡಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡಿದ್ದರು. ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹನಮಂತಪ್ಪ ಕೊಪ್ಪದ ಅವರನ್ನು ರಕ್ಷಿಸಲಾಗಿತ್ತು. ಬಳಿಕ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೌಲಾ ಕಾನ್ ನಲ್ಲಿರುವ ಸೇನಾ ಸಂಶೋಧನಾ ಆಸ್ಪತ್ರೆಯಲ್ಲಿ ಹನಮಂತಪ್ಪ ಕೊಪ್ಪದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮಗ ಆದಷ್ಟು ಬೇಗ ವಾಪಸ್ ಬರಲಿ ಅಂತ ಪ್ರಾರ್ಥನೆ ಮಾಡ್ತಿದ್ವಿ…ದೇವ್ರು ದೊಡ್ಡಾವ್ನೂರ್ರೀ…ನನ್ ಮಗ ಬದುಕ್ಯಾನ್ರೀ…ಇದು ಸಿಯಾಚಿನ್ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ಬಳಿಕ ಪವಾಡ ಸದೃಶ ಬದುಕುಳಿದಿರುವ ಧಾರವಾಡ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ, ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ್ ತಾಯಿ ಬಸವ್ವ ಅವರ ಸಂತಸದ ನುಡಿ.