ಹೊಸದಿಲ್ಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ ಬನ್ ಭಟ್ಟಾಚಾರ್ಯ ಮಂಗಳವಾರ ತಡರಾತ್ರಿ ದೆಹಲಿ ಪೊಲೀಸರ ಬಳಿ ಶರಣಾಗಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಖಾಲಿದ್ ಸೇರಿ ಮತ್ತೈವರು ವಿದ್ಯಾರ್ಥಿಗಳ ವಿಷಯದಲ್ಲಿ ಕಠಿಣ ನಿಲುವು ತಳೆದಿದ್ದ ದೆಹಲಿ ಹೈಕೋರ್ಟ್, ಪೊಲೀಸರಿಗೆ ಶರಣಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧನದ ನಂತರ ಕಣ್ಮರೆಯಾಗಿ ಭಾನುವಾರ ರಾತ್ರಿಯಷ್ಟೇ ವಿವಿಯ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡಿದ್ದ ಉಮರ್ ಖಾಲಿದ್ ಸೇರಿ ಐವರು ವಿದ್ಯಾರ್ಥಿಗಳು ಶರಣಾಗುವುದಕ್ಕೂ ಮುನ್ನು ರಕ್ಷಣೆಗಾಗಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಇಬ್ಬರೂ ಬಂಧನಕ್ಕೆತಡೆಕೋರಿ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತಲ್ಲದೆ ಕೂಡಲೇ ಪೊಲೀಸರಿಗೆ ಶರಣಾಗಲು ಕೋರ್ಟ್ ಸೂಚನೆ ನೀಡಿತ್ತು. ದೇಶದ್ರೋಹದ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಕನ್ಹಯ್ಯ ಕುಮಾರ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಇಂದು ವಿಚಾರಣೆಗೆತ್ತಿಕೊಳ್ಳಲಿದೆ.