ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಅಡಗಿದ್ದ ಮೂವರು ಉಗ್ರರನ್ನು ಬುಧವಾರ ರಾತ್ರಿ ಸೇನಾ ಪಡೆ ಹತ್ಯೆ ಮಾಡಿದೆ.
ಮನೆಯೊಂದರಲ್ಲಿ ಅವಿತಿದ್ದ ಉಗ್ರರನ್ನು ಮಧ್ಯರಾತ್ರಿ ವೇಳೆಗೆ ಹೊಡೆದುರುಳಿಸುವಲ್ಲಿ ಸೇನಾ ಪಡೆ ಯಶಸ್ವಿಯಾಗಿದೆ. ಹತ್ಯೆಯಾಗಿರುವ ಮೂವರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯವರೆಂದು ಸೇನಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆಶಿಕ್ ಹುಸೇನ್ ಭಟ್, ಮೊಹಮ್ಮದ್ ಇಸಾಕ್ ಪಾರ್ರಿ, ಆಸೀಫ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದ್ದು ಆಶಿಕ್ ಹುಸೇನ್ ಭಟ್ ಕಳೆದ ವರ್ಷ ಬಿಎಸ್ ಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಿದ ಉಗ್ರರಿಗೆ ಆಶ್ರಯ ನೀಡಿದ್ದ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.