ಮೊರದಾಬಾದ್: ದೇಶದ ನಾಗರಿಕರೇ ನನಗೆ ಹೈಕಮಾಂಡ್ ನನಗೆ ಕೇವಲ 50ದಿನ ಸಮಯ ಕೊಡಿ. ದೇಶದಲ್ಲಿ ಬದಲಾವಣೆ ಎಂದರೆ ಏನು ಅಂತ ತೋರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಶನಿವಾರ ನಡೆದ ಪರಿವರ್ತನ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿನ ಬಡತನ ಮತ್ತು ಭ್ರಷ್ಟಾಚಾರ ತನ್ನಿಂದ ತಾನಾಗಿಯೇ ನಿರ್ಮೂಲನೆ ಆಗೋದಿಲ್ಲ. ಅಭಿವೃದ್ಧಿ ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ. ನಾನೊಬ್ಬ ಫಕೀರ…ಜೋಳಿಗೆ ಹಾಕಿಕೊಂಡು ಹೋಗುವೆ.ನನಗೆ ಕಳೆದುಕೊಳ್ಳುವಂತಾದ್ದು ಏನೂ ಇಲ್ಲ. ಯಾವ ಭಯವೂ ಇಲ್ಲ. ದೇಶ ಸೇವೆ ಮಾಡುವುದೇ ನನ್ನ ಕರ್ತವ್ಯ ಎಂದರು.
ಇದೇ ವೇಳೆ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ ಅವರು, ನಾವು ಭ್ರಷ್ಟರ ಎಲ್ಲಾ ದಾರಿಗಳನ್ನು ಬಂದ್ ಮಾಡಿಯೇ ತೀರುತ್ತೇವೆ. ನೋಟ್ ನಿಷೇಧದ ನಂತರ ಭ್ರಷ್ಟರು ಜನ್ ಧನ್ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಒಂದು ವೇಳೆ ದುರ್ಬಳಕೆ ಮಾಡಿಕೊಂಡರೆ ಅವರಿಗೆ ಶಿಕ್ಷೆ ಖಚಿತ ಎಂದರು.
ನಗದು ವ್ಯವಹಾರ ಕಡಿಮೆ ಮಾಡಿ,ಕೈಯಲ್ಲಿರುವ ಮೊಬೈಲ್ ಅನ್ನೇ ವ್ಯವಹಾರಕ್ಕೆ ಬಳಸಿ. ನಗದು ರಹಿತ ವಹಿವಾಟು ವ್ಯವಸ್ಥೆ ಜಾರಿಯಾಗಬೇಕು. ನನ್ನ ದೇಶ ಬದಲಾವಣೆ ಒಪ್ಪಿಕೊಳ್ಳಲು ಸದಾ ಸಿದ್ಧವಿದೆ. ಜನಸಾಮಾನ್ಯರು ದೇಶಕ್ಕಾಗಿ ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಭ್ರಷ್ಟಾಚಾರಿಗಳು ಅವರನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಅದ್ಯಾವುದಕ್ಕೂ ಹೆದರಲ್ಲ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾರು ಏನೇ ಅಂದರೂ ಭ್ರಷ್ಟಾಚಾರದ ವಿರುದ್ಧದ ನನ್ನ ಸಮರ ನಿಲ್ಲಲ್ಲ ಎಂದರು.