ಆಗ್ರಾ: ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನಿ ಮೋದಿಯನ್ನು ಹಿಂದೂ ವಿರೋಧಿ ಎಂದು ಬಣ್ಣಿಸಿದೆ.
ಹಿಂದೂಗಳ ವಿವಾಹ ಋತು ಪ್ರಾರಂಭವಾಗುವ ಸಮಯದಲ್ಲಿ ಹಾಗೂ ಬಿಜೆಪಿ ಸದಸ್ಯರು ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕ್ ಉತ್ತೇಜಿಸುವ ಸಮಯದಲ್ಲೇ ನೋಟು ರದ್ಧತಿ ಕ್ರಮ ಕೈಗೊಳ್ಳಲಾಗಿದ್ದು, ಈ ಮೂಲಕ ಮೋದಿಯ ಆಡಳಿತ ಅಂತ್ಯವಾಗಲಿದೆ ಎಂದು ಹಿಂದೂ ಮಹಾಸಭೆ ಹೇಳಿದೆ.
ಪ್ರತಿ ದಿನ ಸರಕಾರಿ ಪಿಂಚಣಿ ಅವಲಂಭಿಸಿರುವವರು ಮತ್ತು 200 ರಿಂದ 300 ರೂ. ವೇತನ ಪಡೆಯುವವರು ಕಷ್ಟಪಡುತ್ತಿದ್ದು, ಶ್ರೀಮಂತರಿಗೆ ಸರಕಾರದ ಈ ಕ್ರಮ ಬಾಧಿಸಿಲ್ಲ ಎಂದು ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹೇಳಿದ್ದಾರೆ.
ದೇಶದ ಪ್ರಥಮ ಇಸ್ಲಾಮಿಕ್ ಬ್ಯಾಂಕಿಂಗ್ ಸೇವೆಯನ್ನು ಶೋಲಾಪುರದಲ್ಲಿ ಉದ್ಘಾಟಿಸಿದ ಬಿಜೆಪಿ ಶಾಸಕ ಹಾಗೂ ಮಹಾರಾಷ್ಟ್ರ ಸಹಕಾರ ಸಚಿವ ಸುಭಾಷ್ ದೇಶ್ ಮುಖ್ ಅವರನ್ನು ಉಲ್ಲೇಖಿಸುತ್ತಾ, ಬಿಜೆಪಿ ಸದಸ್ಯರು ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳನ್ನು ಉತ್ತೇಜಿಸುತ್ತಿದ್ದು, ಹಿಂದೂ ವಿವಾಹ ಋತುವಿನ ಆರಂಭದಲ್ಲೇ ನೋಟು ರದ್ಧತಿ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸಾವಿರಾರು ಕುಟುಂಬಗಳು ವಿವಾಹದ ಖರ್ಚು ನಿಭಾಯಿಸಲು ಸಾಧ್ಯವಾಗದೆ. ಸ್ನೇಹಿತರ, ಸಂಭಂದಿಕರ ಮುಂದೆ ಕೈಯೊಡ್ಡಬೇಕಾದ ಪರಿಸ್ಥಿತಿ ಬಂದಿದೆ, ಕೆಲವರು ವಿವಾಹ ಮುಂದೂಡಿದರೆ, ಇನ್ನೂ ಕೆಲವರು ವಿವಾಹ ರದ್ದುಗೊಳಿಸಿದ್ದಾರೆ. ಎಂದು ಹೇಳಿದ್ದು, ನೋಟು ಅಮಾನ್ಯ ಅಥವಾ ಡಿಮಾನಿಟೈಝೇಶನ್ ಅಂತಿಮವಾಗಿ ಡಿ ಮೋದಿಟೈಝೇಶನ್ ಗೆ ಅನವು ಮಾಡಿಕೊಟ್ಟಿದೆ. ಈ ಮೂಲಕ ಮೋದಿಯ ಹಿಂದುತ್ವ ಮುಖವಾಡ ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ.