ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ತಮಿಳು ಸುದ್ದಿವಾಹಿನಿಗಳು ಸುದ್ದಿ ಮಾಡಿದ್ದು, ಈ ಸುದ್ದಿಯನ್ನು ಅಪೋಲೊ ಆಸ್ಪತ್ರೆ ತಳ್ಳಿ ಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಪೋಲೊ ಆಸ್ಪತ್ರೆ, ಜಯಲಲಿತಾ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಕೃತಕ ಉಸಿರಾಟ ಅಳವಡಿಸಲಾಗಿದೆ. ಅವರನ್ನು ಬದುಕಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ. ತಮಿಳು ಹಾಗೂ ಕನ್ನಡದ ಕೆಲವು ಸುದ್ದಿ ವಾಹಿನಿಗಳು ಜಯಲಲಿತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ನಿಧನ ವಾರ್ತೆಯನ್ನು ಆಸ್ಪತ್ರೆ ಇದುವರೆಗೂ ಅಧಿಕೃತಗೊಳಿಸಿಲ್ಲ.
ಸೆಪ್ಟೆಂಬರ್ 22ರಿಂದ ಜಯಾಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಭಾನುವಾರ ಸಂಜೆ ಜಯಾಗೆ ಹೃದಯಾಘಾತವಾಗಿತ್ತು. ಜೀವನ್ಮರಣ ಹೋರಾಟ ಸ್ಥಿತಿಯಲ್ಲಿರುವ ಜಯಾಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಜಯಾ ಅವರಿಗೆ 72 ದಿನಗಳ ನಂತರ ಯಾವ ಕ್ಷಣದಲ್ಲೂ ಏನು ಬೇಕಾದರೂ ಸಂಭವಿಸಬಹುದು ಎಂದು ಲಂಡನ್ನಿಂದ ಆಗಮಿಸಿದ್ದ ತಜ್ಞ ವೈದ್ಯ ರಿಚರ್ಡ್ ಬೀಲೆ ಎಚ್ಚರಿಕೆ ನೀಡಿದ್ದರು.
ಹಲವು ದಿನಗಳ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯ ಸ್ತಂಭನ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಭಾನುವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರಿದ್ದರು . ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು.