ಹೊಸದಿಲ್ಲಿ: ಕಾವೇರಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಕಾವೇರಿ ಐ ತೀರ್ಪು ಪ್ರಶ್ನಿಸಿ ಕರ್ನಾಟಕ ಸೇರಿದಂತೆ 3 ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಂ ಖಾನ್ ವಿಲ್ಕರ್, ದೀಪಕ್ ಮಿಶ್ರಾ, ಅಮಿತವ್ ರಾಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ತನ್ನ ಮಹತ್ವದ ಆದೇಶ ನೀಡಿದ್ದು, ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ ವಿಚಾರಣೆಯನ್ನು ಡಿಸೆಂಬರ್ 15ರಿಂದ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ನ್ಯಾಯಪೀಠ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರ ರಾಜ್ಯಗಳ ಮೇಲ್ಮನವಿ ಅರ್ಜಿಯನ್ನ ಅಸಿಂಧುಗೊಳಿಸಿ ಐ ತೀರ್ಪನ್ನ ಪಾಲಿಸುವಂತೆ ಸುಪ್ರೀಂಕೋರ್ಟ್ ಮುಂದೆ ತಿಳಿಸಿತ್ತು. ಕೇಂದ್ರದ ತೀರ್ಮಾನಕ್ಕೆ ಪುದುಚೇರಿ ಕೂಡ ಸಾಥ್ ಕೊಟ್ಟಿತ್ತು. ಆದರೆ ಈಗ ಕೇಂದ್ರ ಸರ್ಕಾರ ಮತ್ತು ಪುದುಚೆರಿ ವಾದ ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್ ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳನ್ನ ಮಾನ್ಯ ಮಾಡಿದೆ.