ಅಮೃತಸರ: ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭೀಕರ ಉಗ್ರ ದಾಳಿ ಬೆನ್ನಲ್ಲೇ ಪಠಾಣ್ ಕೋಟ್ ಸೇನಾ ಕ್ಯಾಂಪ್ ಬಳಿ ಶಂಕಿತ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಶಂಕಿತರೆಲ್ಲರೂ ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ನಿನ್ನೆ ತಡರಾತ್ರಿಯಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಆಲ್ಟೋ ಕಾರನ್ನು ಸ್ಥಳೀಯರೇ ಹಿಡಿದಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರೆಲ್ಲರೂ ಇಳಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಕಾರನ್ನು ವಶಕ್ಕೆ ಪಡೆದಿರುವ ಪಠಾಣ್ ಕೋಟ್ ಪೊಲೀಸರು, ಪರಾರಿಯಾದ ಶಂಕಿತರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಾರು ಜಮ್ಮು ಮತ್ತು ಕಾಶ್ಮೀರದ ನೋಂದಣಿ ಹೊಂದಿದ್ದು, ಕಾರಿನಲ್ಲಿ ಯಾವುದೇ ರೀತಿ ಸ್ಫೋಟಕಗಳು ಅಥವಾ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.