ಮುಂಬೈ: ಬಾಲಿವುಡ್ ನ ಖ್ಯಾತ ನಟ ಓಂಪುರಿ ಅವರು ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕ/ನಿರ್ಮಾಪಕ ಅಶೋಕ್ ಪಂಡಿತ್ ಅವರು ಓಂಪುರಿ ನಿಧನ ಸುದ್ದಿಯನ್ನು ಸ್ಪಷ್ಟಪಡಿಸಿದ್ದು, ಮನೆಯಲ್ಲೇ ಅವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಬಹುಭಾಷಾ ನಟ ಓಂ ಪುರಿ ಅವರು ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್, ಹಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿದ್ದ ಅವರಿಗೆ 66 ವರ್ಷ ವಯಸ್ಸಾಗಿತ್ತು.
1976ರಲ್ಲಿ ಮರಾಠಿ ಚಿತ್ರ ಘಾಶಿರಾಮ್ ಕೋತ್ವಾಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಫ್ರೆಂಚ್ ಸೇರಿದಂತೆ ಸುಮಾರು 7ಕ್ಕೂ ಅಧಿಕ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ ತಬ್ಬಲಿ ನೀನಾದೆ ಮಗನೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಓಂಪುರಿ ಅವರು ಬಳಿಕ ಶಿವರಾಜ್ ಕುಮಾರ್ ಅಭಿನಯದ ಎಕೆ 47, ದರ್ಶನ್ ಅಭಿನಯದ ಧೃವ, ಸಂತೆಯಲ್ಲಿ ನಿಂತ ಕಬೀರ, ಟೈಗರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇದಲ್ಲದೆ ತೆಲುಗು ಮತ್ತು ಮಲಯಾಳಂ ಭಾಷೆಗಳ ಹಲವು ಚಿತ್ರಗಳಲ್ಲಿ ನಟ ಓಂಪುರಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2013ರಲ್ಲಷ್ಟೇ ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಅವರು ನಿಧನರಾಗಿದ್ದರು. ತಮ್ಮ ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಓಂಪುರಿ ಅವರು ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಲಾತ್ಮಾಕ, ಬ್ರಿಜ್ ಸಿನಿಮಾ, ಪ್ಯಾರಲಲ್ ಸಿನಿಮ ಎಂದರೆ ಓಂ ಪುರಿ ನೆನಪಾಗುತ್ತಾರೆ. ರಂಗಭೂಮಿಯ ಹಿನ್ನಲೆಯಿಂದ ಬಂದಿರುವ ಓಂ ಅವರು ಎಲ್ಲಾ ರೀತಿಯ ಪಾತ್ರಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಿದ್ದರು. ಅರ್ಧ್ ಸತ್ಯ, ಮಿರ್ಚ್ ಮಸಾಲಾ, ಧಾರಾವಿ ಚಿತ್ರಗಳ ಮೂಲಕ ಇವರ ಪ್ರತಿಭೆ ಬೆಳಕಿಗೆ ಬಂದಿತು.