ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರು ಈ ಬಾರಿ ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದೇ ನಡೆಯುತ್ತದೆ ಹಾಗೂ ಈ ವಿಚಾರದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ 2014ರಲ್ಲಿ ಈ ಆಚರಣೆಗೆ ಗೂಳಿಗಳನ್ನು ಬಳಸುವುದಕ್ಕೆ ನಿಷೇಧ ಹೇರಿದ್ದು, ತಮಿಳುನಾಡು ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಕ್ಕೆ ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಪತ್ರವನ್ನು ಬರೆದಿತ್ತು.
ತಮಿಳುನಾಡಿನ ಜನತೆಗೆ ಪೊಂಗಲ್ ಹಬ್ಬವು ಪ್ರಮುಖವಾಗಿದೆ. ಜಲ್ಲಿಕಟ್ಟು ಕ್ರೀಡೆಯು ಪೊಂಗಲ್ ಹಬ್ಬದ ಅವಿಭಾಜ್ಯ ಅಂಗವೇ ಆಗಿದ್ದು, ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಹಾಗಾಗಿ ಜಲ್ಲಿಕಟ್ಟು ಆಚರಣೆಗೆ ತಡೆಯಾಗಿರುವ ಕಾನೂನಿನ ಅಡತಡೆಗಳನ್ನು ನಿವಾರಿಸುವಂತೆ ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ರಾಜ್ಯ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ಪತ್ರ ಬರೆದಿದ್ದಾರೆ.
‘ಈ ವರ್ಷ ಜಲ್ಲಿಕಟ್ಟು ಕ್ರೀಡೋತ್ಸವ ತಮಿಳುನಾಡಿನಲ್ಲಿ ನಡೆದೇ ತೀರುತ್ತದೆ. ಕ್ರೀಡೋತ್ಸವ ಪುನರಾರಂಭಿಸುವ ಯತ್ನಗಳಿಂದ ತಮಿಳುನಾಡು ಸರ್ಕಾರ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಜಲ್ಲಿಕಟ್ಟು ವಿವಾದ ಸಂಬಂಧ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದಾರೆ.