ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡುವ ಮೂಲಕ 68ನೇ ಗಣರಾಜ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ದೆಹಲಿ ರಾಜ್ ಪಥ್ ನಿರ್ಮಿಸಲಾಗಿರುವ ವಿಶೇಷ ವೇದಿಕೆಗೆ ಆಗಮಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ತ್ರಿವರ್ಣ ಧ್ವಜಾರೋಹಣ ಮಾಡಿದರು. ಈ ವೇಳೆ ಗಡಿಯಲ್ಲಿ ತಮ್ಮ ಶೌರ್ಯ ಪ್ರದರ್ಶನ ಮಾಡಿ 3 ಉಗ್ರರನ್ನು ಹತ್ಯೈಗೈದಿದ್ದ ಹುತಾತ್ಮ ಯೋಧ ಹವಾಲ್ದಾರ್ ಹಂಗಪನ್ ದಾದಾ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಂಗಪನ್ ದಾದಾ ಅವರ ಪತ್ನಿ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಧ್ವಜಾರೋಹಣ ಮುನ್ನ ಪ್ರಧಾನಿ ಮೋದಿ ಇಂಡಿಯಾ ಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿಗೆ ನಮನ ಸಲ್ಲಿಸಿದರು. ಈ ವೇಳೆ ಮೂವರು ಸೇನಾ ಮುಖ್ಯಸ್ಥರು ಉಪಸ್ಥಿತರಿದ್ದರು. ನಮನ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ನೇರ ರಾಜ್ಪಥ್ ಭವನಕ್ಕೆ ತೆರಳಿದರು. ಈ ವೇಳೆ ಮೂವರು ಸೇನಾ ಮುಖ್ಯಸ್ಥರು ಪ್ರಧಾನಿ ಮೋದಿಯವರನ್ನು ವೇದಿಕೆಗೆ ಬರಮಾಡಿಕೊಂಡರು.
ಗಣರಾಜ್ಯೋತ್ಸವದ ಮುಖ್ಯ ಅತಿಥಿ ಶೇಖ್ ಮೊಹಮ್ಮದ್ರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಬಳಿಕ ರಾಜ್ಪಥ್ನಲ್ಲಿ ಸೇನಾ ಪಡೆಗಳಿಂದ ಆಕರ್ಷಕ ಪರೇಡ್ ವೀಕ್ಷಿಸಿದರು.
ಭಾರತೀಯ ಸೇನೆಯ ಎಂಐ-17 ಹೆಲಿಕಾಪ್ಟರ್ ಗಳು ಆಗಸದಲ್ಲಿ ತ್ರಿವರ್ಣ ಧ್ವಜವನ್ನು ಹೊತ್ತು ಸಾಗುವ ಮೂಲಕ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದವು. ಭಾರತೀಯ ಸೇನೆ ಪ್ರಮುಖ ಅಸ್ತ್ರ ಎಂದೇ ಹೇಳಲಾಗುತ್ತಿರುವ ಟಿ-90 ಭೀಷ್ಮ ಟ್ಯಾಂಕರ್ ಗಳು ಪರೇಡ್ ನಡೆಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದವು. ಭಾರತೀಯ ವಾಯು ಸೇನೆಯ 27 ಯುದ್ಧ ವಿಮಾನಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಆಗಸದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿ ಅಬುಧಾಯಿ ಯುವರಾಜ ಶೇಖ್ ಅಹಮ್ಮದ್, ಪ್ರಧಾನಿ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಮಾಜಿ ಪ್ರಧಾನಿ ದೇವೇಗೌಡ, ಮೂವರು ಸೇನಾ ಮುಖ್ಯಸ್ಥರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.