ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಶ್ರಿತರು ಹಾಗೂ 7 ಇಸ್ಲಾಮಿಕ್ ರಾಷ್ಟ್ರಗಳ ಜನರ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಗ್ರತತ್ವದ ಇಸ್ಲಾಮಿಕ್ ಭಯೋತ್ಪಾದಕರಿಂದ ಅಮೆರಿಕಾವನ್ನು ರಕ್ಷಿಸಲು ಈ ಕ್ರಮ ಕೈಗೊಂಡಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಅಮೆರಿಕಾಗೆ ಇಸ್ಲಾಮಿಕ್ ರಾಷ್ಟ್ರಗಳಿಂದ ಬರುವ ಜನರನ್ನು ನಿಯಂತ್ರಿಸುವುದಕ್ಕೆ ಕಠಿಣ ನಿಯಮಗಳನ್ನು ವಿಧಿಸಿ ಜ.27 ರಂದು ಆದೇಶ ಹೊರಡಿಸಲಾಗಿದ್ದು, ಟ್ರಂಪ್ ಚುನಾವಣೆಯ ಭರವಸೆಗಳಲ್ಲಿ ಇಸ್ಲಾಮಿಕ್ ರಾಷ್ಟ್ರಗಳಿಂದ ಬರುವ ನಿರಾಶ್ರಿತರು ಹಾಗೂ ಜನರು ಅಮೆರಿಕ ಪ್ರವೇಶಿಸದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಪ್ರಮುಖವಾಗಿತ್ತು.
ದೇಶವನ್ನು ಬೆಂಬಲಿಸುವ, ದೇಶದ ಜನರನ್ನು ಪ್ರೀತಿಸುವವರಷ್ಟೇ ಬೇಕು. ಉಗ್ರವಾದದ ಇಸ್ಲಾಮಿಕ್ ಭಯೋತ್ಪಾದಕರು ನಮ್ಮ ದೇಶದಲ್ಲಿರುವುದು ಬೇಡ ಮತ್ತು ದೇಶವನ್ನು ರಕ್ಷಿಸಲು ಹೊರಗಿನ ಶತ್ರುಗಳು ಒಳನುಗ್ಗುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.