ಲಾಹೋರ್: 26/11 ಮುಂಬೈ ದಾಳಿಯ ಪ್ರಮುಖ ರುವಾರಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ ನನ್ನು ಪಾಕಿಸ್ತಾನದ ಲಾಹೋರ್’ನಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗೃಹ ಬಂಧನದಲ್ಲಿರುವ ಉಗ್ರ ಸಯೀದ್ 2008ರ 26/11 ಮುಂಬೈದಾಳಿಯ ಪ್ರಮುಖ ರುವಾರಿಯಾಗಿದ್ದು, ಭಾರತ-ಅಮೆರಿಕಾ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಮುಂಬೈ ದಾಳಿಯಲ್ಲಿ ಹಲವಾರು ಅಮಾಯಕ ಜೀವಗಳ ಸಾವಿಗೆ ಕಾರಣನಾಗಿದ್ದ ಸಯೀದ್ ನನ್ನು ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವಂತೆ ಭಾರತ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ, ಪಾಕಿಸ್ತಾನ ಮಾತ್ರ ಆತನನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಬಂದಿತ್ತು. ಇದೀಗ ಪಾಕಿಸ್ತಾನ ಸರ್ಕಾರವೇ ಹಫೀಜ್’ಗೆ ಗೃಹಬಂಧನದಲ್ಲಿ ಇರಿಸಿರುವ ಹಿನ್ನಲೆ ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ನಡೆಯುತ್ತಿದೆ. ಹಫೀಜ್ ನ್ನು ಗೃಹ ಬಂಧನದಲ್ಲಿ ಇರಿಸುವುದರ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಚೌಧರಿ ನಿಸಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಹಫೀಜ್ ಸಯೀದ್ ಗೆ ಗೃಹ ಬಂಧನ ವಿಧಿಸಿರುವ ಪಾಕಿಸ್ತಾನ ಸರ್ಕಾರ ಈತನ ಉಗ್ರ ಸಂಘಟನೆಗೂ ನಿಷೇಧ ಹೇರುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ. ಹಪೀಝ್ ಸೈಯದ್ ನನ್ನು ಲಾಹೋರ್ ನಲ್ಲಿರುವ ಚೌಬುರ್ಜಿಯ ಖ್ವಾದ್ವಿಸಿಯ ಮಸೀದಿ ಬಳಿಯ ಗೃಹ ಬಂಧನದಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.