ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮೀರತ್ನಲ್ಲಿ ಭಾಷಣ ಮಾಡಿ ದೇಶವನ್ನು SCAMನಿಂದ ಮುಕ್ತಗೊಳಿಸಿ ಎಂದು ಕರೆ ನೀಡಿದ್ದರು.
ಮೋದಿಯವರ ಪ್ರಕಾರ ಈ SCAM ಅಂದರೆ ಸಮಾಜವಾದಿ ಪಕ್ಷ (S), ಕಾಂಗ್ರೆಸ್ (C), ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ (A) ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ (M). ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ), ಪ್ರಧಾನಿಯವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ರೀತಿ ವಿಸ್ತೃತರೂಪದ ಬಗ್ಗೆ ಹೇಳುವ ಬದಲು ದೇಶದ ಸಮಸ್ಯೆಯತ್ತ ಗಮನಹರಿಸಿ ಎಂದಿದೆ.
ಸಮಾಜವಾದಿ ಪಕ್ಷಕ್ಕಾಗಲೀ ಅಥವಾ ಮಾಯಾವತಿಗೆ ಮತ ಯಾಕೆ ನೀಡಬಾರದು? ಬಿಜೆಪಿಗೆ ಯಾಕೆ ಮತನೀಡಬೇಕು? ಎಂಬುದನ್ನು ಅವರು ಹೇಳಲಿ. ಸುದೀರ್ಘ ಭಾಷಣ ಮಾಡುವಾಗ ಇಂಥಾ ವಿಷಯಗಳೂ ಅದರಲ್ಲಿರಲಿ, ದೇಶದ ಪ್ರಧಾನಿಯೊಬ್ಬರು ಮಕ್ಕಳಂತೆ ಮಾತನಾಡುವುದನ್ನು ನಿಲ್ಲಿಸಿ, ದೇಶದ ಸಮಸ್ಯೆ ಬಗ್ಗೆ ಗಮನಹರಿಸಲಿ. ಮೋದಿಯವರು ಸುಮ್ಮನೆ ಹರಟೆ ಹೊಡೆಯುತ್ತಿದ್ದು, ನೋಟು ರದ್ದತಿಯಿಂದುಂಟಾದ ಸಮಸ್ಯೆಗಳ ಬಗ್ಗೆ ಏನೇನೂ ಮಾತನಾಡುವುದಿಲ್ಲ, ಎಂದು ಎನ್ಸಿಪಿ ನಾಯರ ಮಜೀದ್ ಮೆಮನ್ ಹೇಳಿದ್ದಾರೆ.
ಬಡತನವನ್ನು ಹೋಗಲಾಡಿಸಲು ಅಥವಾ ಉದ್ಯೋಗವಕಾಶಗಳನ್ನು ಹೆಚ್ಚಿಸುವ ಬಗ್ಗೆ ನೀವೇನೂ ಕಾರ್ಯ ಪ್ರವೃತ್ತರಾಗಿಲ್ಲ, ಸೇವಾ ತೆರಿಗೆ ಅಥವಾ ಪರೋಕ್ಷ ತೆರಿಗೆಯನ್ನು ಮನ್ನಾಮಾಡುವ ಬಗ್ಗೆ ಮಾತನಾಡಿಲ್ಲ, ನಿಮ್ಮ ಬಜೆಟ್ನಲ್ಲಿ ಬಡವರಿಗೆ ಪ್ರಯೋಜನವಾಗುವ ಯೋಜನೆಗಳೇನೂ ಇಲ್ಲ. ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ 100 ದಿನಗಳೇ ಕಳೆದವು ಎಂದು ಮೆಮನ್ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.