ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಇನ್ನೊಂದು ವಾರದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮೇಲ್ಮನವಿ ಅರ್ಜಿಯ ತೀರ್ಪನ್ನು ಹೊರಹಾಕಲಿದೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ್ದ ದುಷ್ಯಂತ್ ದಾವೆ ಅವರು ಕೋರ್ಟ್ ಕಾಯ್ದಿರಿಸಿದ್ದ ತೀರ್ಪಿನ ಕುರಿತು ನ್ಯಾಯಾಲಯದ ಗಮನಕ್ಕೆ ತಂದಿದ್ದು, ತೀರ್ಪು ಹೊರಬೀಳುವುದನ್ನು ಕಾಯುತ್ತಿದ್ದು, ಶೀಘ್ರದಲ್ಲಿ ತೀರ್ಪು ಪ್ರಕಟಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇದೀಗ ಶಶಿಕಲಾ ಅವರು ಜಯಲಲಿತಾ ಅವರ ಸಾವಿನ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಪ್ರೀಂ ಕೋರ್ಟ್ನ ತೀರ್ಪು ಇವರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಈ ಪ್ರಕರಣ ಸಂಬಂಧ ರಾಜ್ಯ ಪರ ಹಿರಿಯ ವಕೀಲ ದುಷ್ಯಂತ್ ದಾವೆ ಅವರಿಗೆ ಪೀಠದ ನ್ಯಾಯಮೂರ್ತಿ ಪಿ.ಸಿ. ಘೋಸೆ ಅವರು ಕಾಯ್ದಿರಿಸಿದ ತೀರ್ಪಿನ್ನು ಪ್ರಕಟಿಸಲು ಒಂದು ವಾರ ಕಾಯಿರಿ ಎಂದು ಹೇಳಿದೆ.