ಹೊಸದಿಲ್ಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ವಿಕೆ ಶಶಿಕಲಾ ಅಪರಾಧಿ ಎಂದು ಘೋಷಿಸಿದ್ದು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇದು ತಮಿಳುನಾಡು ಸಿಎಂ ಆಗಬಯಸಿದ್ದ ಶಶಿಕಲಾ ಅವರಿಗೆ ಬರಸಿಡಿಲಿನ ತೀರ್ಪು. ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಆಗಲು ಅವಕಾಶ ನೀಡುವಂತೆ ಕೋರಿದ್ದರು. ಈಗ ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದ ಶಶಿಕಲಾ 4 ವರ್ಷ ಜೈಲು ಸೇರಬೇಕಿದೆ. ಹೀಗಾಗಿ ಸಿಎಂ ಗಾದಿಗೇರುವ ಪ್ರಶ್ನೆಯೂ ಉದ್ಭವಿಸಲ್ಲ. ಜೊತೆಗೆ 10 ವರ್ಷಗಳ ಕಾಲ ಯಾವುದೇ ಚುನಾವಣೆ ಎದುರಿಸಲು ಕೂಡ ಶಶಿಕಲಾ ಅನರ್ಹರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯ ಮೀರಿ ಆಸ್ತಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಅವರು ಮೃತಪಟ್ಟಿರುವುದರಿಂದ ಅವರನ್ನು ಪ್ರಕರಣದಿಂದ ಕೈಬಿಡಲಾಗಿದ್ದು, ಇನ್ನು ಎರಡನೇ ಆರೋಪಿ ಶಶಿಕಲಾ, ಮೂರನೇ ಆರೋಪಿ ಸುಧಾಕರನ್ ಮತ್ತು ನಾಲ್ಕನೇ ಆರೋಪಿ ಇಳವರಸಿ ಇದೀಗ ಜೈಲು ಸೆರಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅನ್ವಯ ಇನ್ನು ಆರು ವರ್ಷಗಳ ಕಾಲ ಶಶಿಕಲಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಜತೆಗೆ 10 ವರ್ಷಗಳ ಕಾಲ ಯಾವುದೇ ಸ್ಥಾನವನ್ನು ಅಲಂಕರಿಸುವಂತಿಲ್ಲ.