ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಬಹು ನಿರೀಕ್ಷಿತ ಮತ್ತು ವಿಶ್ವದಾಖಲೆಯ ಏಕಕಾಲಕ್ಕೆ 104 ಉಪಗ್ರಹಗಳನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಬುಧವಾರ ಬೆಳಗ್ಗೆ ಸುಮಾರು 9:28ರ ಸುಮಾರಿಗೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತ ಇಸ್ರೋ ನಿರ್ಮಿತ ಪಿಎಲ್ಎಲ್ ವಿ ರಾಕೆಟ್ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತು. ಬಾನಂಗಳದಲ್ಲಿ ಸುಮಾರು 500 ಕಿ.ಮೀ. ಸಾಗಿ ಹೋದ ನಂತರ ಎಲ್ಲಾ ಉಪಗ್ರಹಗಳನ್ನೂ ಭೂ ಕಕ್ಷೆಗೆ ಸೇರಿಕೊಂಡವು. ಆ ಕ್ಷಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ವಿಶ್ವಮಟ್ಟದಲ್ಲಿ ಹೊಸ ಗರಿಮೆ ತಂದಿತು.
104 ಉಪಗ್ರಹಗಳ ಪೈಕಿ ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹ(ಕ್ಯೂಬ್ಸ್ಯಾಟ್)ಗಳು ಕಕ್ಷೆ ಸೇರಿದ್ದು, ಭಾರತದ ಇದಲ್ಲದೆ ಕಾರ್ಟೋಸ್ಯಾಟ್–2, ಐಎನ್ಎಸ್-1ಎ ಹಾಗೂ ಐಎನ್ಎಸ್–1ಬಿ ಸೇರಿದಂತೆ ಭಾರತದ ಮೂರು ಉಪಗ್ರಹಗಳು ಉಡಾವಣೆಯಾಗಿವೆ. ಪಿಎಸ್ಎಲ್ವಿ–ಸಿ37 ಉಡಾವಣಾ ವಾಹಕ ಒಟ್ಟು1500 ಕೆ.ಜಿ. ತೂಕದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಹೊತ್ತೊಯ್ಯುವ ಮೂಲಕ ಇಸ್ರೋ ಹೊಸ ಮೈಲಿಗಲ್ಲು ತಲುಪಿದೆ.
ಈ ಹಿಂದೆ, ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನಿಟ್ಟು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉದಾಹರಣೆಯೇ ಇಲ್ಲ. 2014ರಲ್ಲಿ ರಷ್ಯಾ ದೇಶವು 57 ಉಪಗ್ರಹಗಳನ್ನು ಒಂದೇ ರಾಕೆಟ್ ನಲ್ಲಿ ಹಾರಿಸಿದ್ದು ಈವರೆಗಿನ ದಾಖಲೆಯಾಗಿದೆ. ಇನ್ನು, ಅಮೆರಿಕದ ‘ನಾಸಾ’ ಸಹ 2015ರ ಜೂನ್ ನಲ್ಲಿ ಒಟ್ಟಿಗೆ 29 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡಿತ್ತು. ಅದೇ ವರ್ಷ ಇಸ್ರೋ ಸಹ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
ಈ ಬಾರಿ ಬಾಹ್ಯಾಕಾಶಕ್ಕೆ ತೆರಳಿದ್ದ ಇಸ್ರೋನ ‘ಪಿಎಸ್ಎಲ್ ವಿ’ ರಾಕೆಟ್ ನಲ್ಲಿ ಒಂದು ದೈತ್ಯ ಗಾತ್ರದ ಉಪಗ್ರಹವೊಂದಿದೆ. ಇದರ ಜತೆಯಲ್ಲಿ 103 ನ್ಯಾನೋ ಉಪಗ್ರಹಗಳಿವೆ. ಮುಖ್ಯ ಉಪಗ್ರಹದ ತೂಕ 714 ಕೆಜಿ ಆಗಿದ್ದು, ಉಳಿದ ನ್ಯಾನೋ ಉಪಗ್ರಹಗಳ ಒಟ್ಟಾರೆ ತೂಕ 664 ಕೆಜಿ. ಹಾಗಾಗಿ, ರಾಕೆಟ್ ನಲ್ಲಿರುವ ಒಟ್ಟು ಎಲ್ಲಾ ಉಪಗ್ರಹಗಳ ತೂಕ 1,378 ಕೆಜಿ.