ಕರಾಚಿ: ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ಪಾಕಿಸ್ತಾನದ ಸೂಫಿ ದರ್ಗಾದಲ್ಲಿ ನಡೆದಿದೆ.
ಪ್ರತಿ ಗುರವಾರ ಸಿಂಧ್ ಪ್ರಾಂತ್ಯದ ಸೆಹ್ವಾನ್ ನಲ್ಲಿರುವ ಲಾಲ್ ಶಹಭಾಝ್ ಖಲಂದರ್ ದರ್ಗಾದಲ್ಲಿ ಜನರ ಸಂಖ್ಯೆ ಹೆಚ್ಚಾಗಿರುತ್ತದೆ. ಮಾತ್ರವಲ್ಲ ಸಾಂಪ್ರದಾಯಿಕ ನೃತ್ಯ ಧಮಲ್ ಎಂಬ ಕಾರ್ಯಕ್ರಮದ ಅಂಗವಾಗಿ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದು, ಈ ಸಂದರ್ಭ ಆತ್ಮಾಹುತಿ ದಾಳಿಯನ್ನು ಉಗ್ರರು ನಡೆಸಿದ್ದಾರೆಂದು ಪೋಲೀಸರು ಹೇಳಿದ್ದಾರೆ.
ಇಸಿಸ್ ಉಗ್ರ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಮೊದಲಿಗೆ ಗ್ರೆನೇಡ್ ದಾಳಿಯನ್ನು ನಡೆಸಿರುವ ಉಗ್ರರು ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ.
ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯನ್ನು ಭದ್ರತಾ ದೃಷ್ಟಿಯಿಂದ ಬಂದ್ ಮಾಡಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಸೇನಾ ಪಡೆ ತಿಳಿಸಿದೆ.