ಹೈದರಾಬಾದ್: ತಿರುಪತಿ ವೆಂಕಟರಮಣನಿಗೆ 5 ಕೋಟಿ ಮೌಲ್ಯದ 19 ಕೆ.ಜಿ ಚಿನ್ನಾಭರಣವನ್ನು ಹರಕೆ ಅರ್ಪಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇದೀಗ ಬಂಗಾರದ ಮೀಸೆಯನ್ನು ಕುರವಿ ವೀರಭದ್ರಸ್ವಾಮಿಗೆ ಅರ್ಪಿಸಲಿದ್ದಾರೆ.
ತಿರುಪತಿ ವೆಂಕಟರಮಣನಿಗೆ ಫೆಬ್ರುವರಿ 22ರಂದು ಚಿನ್ನಾಭರಣ ಅರ್ಪಿಸಿದ ಕೆಸಿಆರ್ ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತಿರುಪತಿಗೆ ಹರಕೆ ಹೊತ್ತಿರುವುದಾಗಿ ಹೇಳಿದ್ದರು.
ಗುತ್ತಿಗೆ ಆಧಾರದ ಮೂಲಕ 15 ದಿನಗಳಲ್ಲಿ ಕೊಯಮತ್ತೂರ್ನ ಕೀರ್ತಿಲಾಲ್ ಕಾಳಿದಾಸ್ ಜುವೆಲರ್ಸ್ ಅವರು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ತಯಾರಿಸಿದ್ದು, ತೆಲಂಗಾಣ ಪದ್ಧತಿಯಂತೆ ಇದರಲ್ಲಿ 14.2 ಕೆ.ಜಿಯ ‘ಸಾಲಿಗ್ರಾಮ್ ಹರಾಮ್’ ಹಾಗೂ 4.61 ಕೆ.ಜಿಯ ಐದು ಸರಗಳಿವೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಚಂದ್ರಶೇಖರ್ ರಾವ್ ಅವರು ಆಭರಣ ತಯಾರಿಸಲು 5 ಕೋಟಿ ಹಣ ನೀಡಿದ್ದರು.
ಚಿನ್ನದ ಮೀಸೆಯನ್ನು ಕುರವಿ ವೀರಭದ್ರಸ್ವಾಮಿ ದೇವಾಲಯಕ್ಕೆ ಸಲ್ಲಿಸಿದ ನಂತರ ವಾರಾಂಗಲ್ನಲ್ಲಿರುವ ಭದ್ರಕಾಳಿ ದೇವರಿಗೆ ಚಿನ್ನದ ಅಂಗಿ, ವಿಜಯವಾಡದಲ್ಲಿರುವ ಕನಕ ದುರ್ಗಾ ದೇವರಿಗೆ ಮತ್ತು ತಿರುಚನೂರಿನಲ್ಲಿರುವ ಪದ್ಮಾವತಿ ದೇವರಿಗೆ ಮೂಗುತಿ ಸಲ್ಲಿಸಲು ಕೆಸಿಆರ್ ನಿರ್ಧರಿಸಿದ್ದಾರೆ.