ಗಾಜಿಯಾಬಾದ್: ರಿಂಗಿಂಗ್ ಬೆಲ್ಸ್ ಪ್ರೈ.ಲಿಮಿಟೆಡ್ ಹಾಗೂ ದೇಶದ ಜನರು ಆತುರದಿಂದ ಕಾಯುತ್ತಿದ್ದ ಅತೀ ಅಗ್ಗದ ಸ್ಮಾರ್ಟ್ಫೋನ್ ಎಂಬ ಖ್ಯಾತಿಗೆ ಪಾತ್ರವಾದ ‘ಫ್ರೀಡಂ 251’ ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೋಯಲ್ ಶೈಕ್ಷಣಿಕ ಅರ್ಹತೆ ಎಂಟನೇ ಕ್ಲಾಸು ಫೇಲ್ ಎಂದು ತಿಳಿದುಬಂದಿದೆ.
ಹೌದು, ಗಾಜಿಯಾಬಾದ್ ಪೊಲೀಸರು ವಂಚನೆ ಪ್ರಕರಣವೊಂದರಲ್ಲಿ ಎರಡು ದಿನಗಳ ಹಿಂದೆಯಷ್ಟೇ ಗೋಯಲ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಈ ಸಂಗತಿ ತಿಳಿದುಬಂದಿದೆ.
ಅಮಿಟಿ ಯುನಿವರ್ಸಿಟಿಯಿಂದ ಎಂಬಿಎ ಮತ್ತು ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿಯಿಂದು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಪದವಿ ಪಡೆದುಕೊಂಡಿರುವುದಾಗಿ ಮೋಹಿತ್ ಗೋಯಲ್ ಅವರು ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ನಲ್ಲಿ ಬರೆದಿದ್ದಾರೆ.
ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಗೋಯಲ್ ತಾನು ಅಮಿಟಿ ಯುನಿವರ್ಸಿಟಿಯಿಂದ ಎಂಬಿಎ ಪದವಿಗಳಿಸಿದ್ದಾಗಿ ಗೋಯಲ್ ಹೇಳಿದ್ದು, ನಂತರ ತಾನು ಅಷ್ಟೆಲ್ಲಾ ಕಲಿತಿಲ್ಲ. ಎಂಟನೇ ತರಗತಿಯಲ್ಲಿ ಫೇಲ್ ಆಗಿದ್ದೆ. ಆಮೇಲೆ ಇಂಗ್ಲಿಷ್ ಮಾತನಾಡುವುದು ಹೇಗೆ ?ಎಂಬ ಕೋರ್ಸ್ ಮಾಡಿದ್ದೆ ಎಂದಿದ್ದಾರೆ.
ಗೋಯಲ್ ತಮ್ಮ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಎಂದು ಅಮಿಟಿ ಯೂನಿವರ್ಸಿಟಿಯ ವಕ್ತಾರರು ಹೇಳಿದ್ದು, ಗೋಯಲ್ ಅಲ್ಲಿ ಯಾವ ಕೋರ್ಸ್ ಮಾಡಿದ್ದಾರೆ? ದೂರ ಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆಯೇ? ಎಂಬ ವಿಷಯವನ್ನು ದೃಢೀಕರಿಸಿಲ್ಲ.
ಫ್ರೀಡಂ 251 ಸ್ಮಾರ್ಟ್ ಫೋನ್ ವಿತರಕರಾಗಿದ್ದ ಅಕ್ಷಯ್ ಮಲ್ಹೋತ್ರಾ ಅವರು ಗೋಯಲ್ ಅವರು 16 ಲಕ್ಷ ರೂ ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ಗೋಯಲ್ ಮತ್ತು ನಾಲ್ವರು ವ್ಯಕ್ತಿಗಳು ಗಾಜಿಯಾಬಾದ್ ಮೂಲಕ ಆಯಂ ಎಂಟರ್ ಪ್ರೈಸೆಸ್ಗೆ ವಂಚನೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ರಿಂಗಿಂಗ್ ಬೆಲ್ಸ್ ಕಂಪನಿ ರೂ 251 ಬೆಲೆಗೆ ‘ಫ್ರೀಡಂ 251’ ಎಂಬ ಜಗತ್ತಿನಲ್ಲೇ ಅತೀ ಅಗ್ಗವಾದ ಸ್ಮಾರ್ಟ್ಫೋನ್ ಪರಿಚಯಿಸುವ ಮೂಲಕ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು.