ಸ್ಯಾನ್ ಜೋಸ್ ಪಿನುಲಾ: ಗ್ವಾಟೆಮಾಲಾದಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಬೆಂಕಿ ಸಂಭವಿಸಿದ ಕಾರಣ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈ ಶಿಬಿರದಲ್ಲಿ 500 ಬೆಡ್ ಗಳ ಸಾಮರ್ಥ್ಯವಿದ್ದು, ಆದರೆ ಇಲ್ಲಿ 800ಕ್ಕೂ ಹೆಚ್ಚು ಮಂದಿಯನ್ನು ಇಡಲಾಗಿತ್ತು. ಇದೇ ಕಾರಣಕ್ಕೆ ಜಾಗ ಸಾಲದೇ ಯುವಕರ ನಡುವೆ ಘರ್ಷಣೆ ಏರ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ.
ನಿರಾಶ್ರಿತ ಶಿಬಿರದಲ್ಲಿರುವ ಮಹಿಳಾ ವಿಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಅಲ್ಲಿದ್ದ ಸುಮಾರು 21 ಮಂದಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಶಿಬಿರದ ಮೂಲಭೂತ ಸೌಕರ್ಯಗಳ ಕುರಿತಂತೆ ಅಲ್ಲಿದ್ದ ಕೆಲ ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಸಂಭವಿಸಿದ ಘರ್ಷಣೆ ವೇಳೆ ಉದ್ರಿಕ್ತರ ಗುಂಪು ಶಿಬಿರಕ್ಕೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಈ ವೇಳೆ ಬೆಂಕಿ ಅಪಾರ ಪ್ರಮಾಣದಲ್ಲಿ ವ್ಯಾಪಿಸಿ ಶಿಬಿರದಲ್ಲಿದ್ದವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.