ಹೊಸದಿಲ್ಲಿ: ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಗೋವಾ ಮತ್ತು ಮಣಿಪುರದಲ್ಲಿ ಹೊರ ಹೊಮ್ಮಿದ್ದು, ತನ್ನ ಹಣಬಲದಿಂದ ಬಿಜೆಪಿಯು ಜನಾದೇಶವನ್ನು ಕೊಳ್ಳುವ ಮೂಲಕ ಕಾಂಗ್ರೆಸ್ನ ಅವಕಾಶವನ್ನು ಕಸಿದುಕೊಂಡಿದೆ ಎಂದು ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ರಾಹುಲ್ ಗಾಂಧಿ ಮಾಧ್ಯಮಗಳ ಪ್ರಶ್ನೆಗೆ ಉತ್ತಿರಿಸಿದ್ದು, ಬಿಜೆಪಿ ಕೇವಲ 2 ರಾಜ್ಯಗಳಲ್ಲಿ ಗೆದ್ದಿದೆ, ಕಾಂಗ್ರೆಸ್ 3 ರಾಜ್ಯಗಳಲ್ಲಿ ಗೆಲುವು ಪಡೆದಿದೆ. ಆದರೆ ಬಿಜೆಪಿ ತನ್ನ ಹಣ ಬಲ ಮತ್ತು ಅಧಿಕಾರ ಬಳಸಿಕೊಂಡು ಅಧಿಕಾರಕ್ಕೆ ಏರುತ್ತಿದೆ. ನಾವು ಬಿಜೆಪಿಯ ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿದ್ದೇವೆ. ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು ನಾವು ವಿರೋಧಿಸುತ್ತೇವೆ ಎಂದು ರಾಹುಲ್ ಹೇಳಿದರು.
ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಎಷ್ಟು ಶೀಘ್ರವಾಗಿ ಹಕ್ಕು ಮಂಡಿಸಿದ್ದಾರೆ ಎಂಬುದು ಪ್ರಶ್ನೆಯಲ್ಲ, ಅವರು ಖರ್ಚು ಮಾಡಿರುವ ಹಣದ ಕುರಿತು ನಾವು ಪ್ರಶ್ನೆ ಎತ್ತುತ್ತಿದ್ದೇವೆ ಎಂದು ರಾಹುಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿದೆ. ರಾಜಕೀಯದಲ್ಲಿ ಸೋಲು, ಗೆಲುವುಗಳು ಸಾಮಾನ್ಯ, ಪಕ್ಷದ ಒಳಗಡೆ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಿದೆ ಎಂದು ರಾಹುಲ್ ಈ ಸಂದರ್ಭ ಹೇಳಿದರು.