ಚೆನ್ನೈ: ವೃತ್ತಿಪರ ರೇಸರ್ ಅಶ್ವಿನ್ ಸುಂದರ್ ಹಾಗೂ ಆತನ ಪತ್ನಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಕಾರು ಮರಕ್ಕೆ ಪರಿಣಾಮ ಬೆಂಕಿ ಅವರಿಬ್ಬರು ಸಜೀವ ದಹನವಾಗಿದ್ದಾರೆ.
ಅಶ್ವಿನ್ ಸುಂದರ್ ಮತ್ತವರ ಪತ್ನಿ ನಿವೇದಿತಾ ಇಂದು ಬೆಳಗ್ಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಚೆನ್ನೈನ ಎಂಆರ್ಸಿ ನಗರದಿಂದ ಅಲಪ್ಪಕ್ಕಂಗೆ ಹೊರಟಿದ್ದರು. ಸುಂದರ್ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ನಗರದ ಫೋರ್ಶೋರ್ ಎಸ್ಟೇಟ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ದಂಪತಿ ಕಾರಿನಿಂದ ಇಳಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಪರಿಣಾಮ ಅಶ್ವಿನ್ ಸುಂದರ್ – ನಿವೇದಿತಾ ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ ಪ್ರಯೋಜನವಾಗಿಲ್ಲ.
ಅಶ್ವಿನ್ ಸುಂದರ್ ಹಾಗೂ ನಿವೇದಿತಾ ಮೃತದೇಹಗಳನ್ನು ಪರೀಕ್ಷೆಗಾಗಿ ಸರ್ಕಾರಿ ರೊಯಪೆಟ್ಟಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಡ್ಯಾರ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಶ್ವಿನ್ ನಿವೇದಿತಾ ಸಾವಿಗೆ ಕ್ರೀಡಾ ಕ್ಷೇತ್ರ ದಿಗ್ಭ್ರಮೆ ವ್ಯಕ್ತಪಡಿಸಿದೆ.
ಅಶ್ವಿನ್ ಸುಂದರ್ ಓರ್ವ ನಿಪುಣ ಕಾರು ರೇಸರ್ ಆಗಿದ್ದು, ಹಲವಾರು ಕಾರು ರೇಸ್ಗಳಲ್ಲಿ ಚಾಂಪಿಯನ್ ಆಗಿದ್ದಾರೆ. 2012 ಮತ್ತು 2013ರ ರಾಷ್ಟ್ರೀಯ ಚಾಂಪಿಯನ್ (F4) ಆಗಿದ್ದರು.