ಲಖನೌ: ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ, ಮುಲಾಯಂ ಸಿಂಗ್ ಯಾದವ್, ಮುರಳಿ ಮನೋಹರ್ ಜೋಶಿ, ಗೃಹ ಸಚಿವ ರಾಜನಾಥ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಉಮಾ ಭಾರತಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್ ಸೇರಿದಂತೆ ಇನ್ನಿತರೆ ಗಣ್ಯಾತಿ ಗಣ್ಯರು ಹಾಜರಿದ್ದರು.
ಲಖನೌದ ಸ್ಮೃತಿ ಉಪವನ್ನಲ್ಲಿ ಮಧ್ಯಾಹ್ನ 2.15ಕ್ಕೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಇದೇ ಮೊದಲ ಬಾರಿಗೆ ನೇಮಕ ಮಾಡಲಾಗಿದೆ.
ಸೂರ್ಯ ಪ್ರತಾಪ್ ಸಾಹಿ, ಸುರೇಶ್ ಖನ್ನಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗೃಹ ಖಾತೆಯ ಜವಾಬ್ದಾರಿಯನ್ನು ಮೌರ್ಯ ಅವರಿಗೆ ನೀಡಲಾಗುವುದೆಂದು ಬಲ್ಲಮೂಲಗಳ ಪ್ರಕಾರ ತಿಳಿದುಬಂದಿದೆ.
ದಾರಾ ಸಿಂಗ್ ಚೌಹಾಣ್, ಧರಂ ಪಾಲ್ ಸಿಂಗ್, ಸತ್ಯದೇವ್ ಪಚೌರಿ, ರಾಮಪತಿ ಶಾಸ್ತ್ರಿ, ಜೆಪಿ ಸಿಂಗ್, ಓಂ ಪ್ರಕಾಶ್ ರಾಜ್ಭರ್, ಲಕ್ಷ್ಮಿ ನಾರಾಯಿನ್ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ, ಮಾಜಿ ಕ್ರಿಕೆಟಿಗ ಮೋಹಸಿನ್ ರಾಜಾ, ನೀಲಕಾಂತ್ ತಿವಾರಿ, ಗಿರೀಶ್ ಚಂದ್ರ ಯಾದವ್ ಮತ್ತು ಬಲದೇವ್ ಔಲಾಖ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.