ಲಂಡನ್: ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭ ಪಾರ್ಲಿಮೆಂಟ್ ನ ಮುಂಭಾಗದಲ್ಲಿ ಪಾದಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಐವರನ್ನು ಹತ್ಯೆ ಮಾಡಿದ್ದಾರೆ.
ಸಂಸತ್ ಒಳಗೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ಪ್ರಧಾನಿಯೂ ಭಾಗಿಯಾಗಿದ್ದರು. ಹೌಸ್ ಆಫ್ ಕಾಮನ್ಸ್ನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಹೊರಗೆ ಹಠಾತ್ ಗುಂಡಿನ ಸದ್ದು ಕೇಳಿ ಬಂದಾಗ ಮುಂಜಾಗ್ರತಾ ಕ್ರಮವಾಗಿ ಸಂಸತ್ ಭವನದ ಪ್ರವೇಶದ್ವಾರವನ್ನು ಬಂದ್ ಮಾಡಲಾಗಿತ್ತು. ಸಂಸತ್ ಕಟ್ಟಡದೊಳಗಿದ್ದ ಸುಮಾರು 200 ಸಂಸದರು ಹಾಗೂ ಪತ್ರಕರ್ತರನ್ನು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸುರಕ್ಷತೆಯಿಂದ ಕರೆದೊಯ್ಯಲಾಗಿದೆ.
ದಾಳಿಯಲ್ಲಿ ಸಾವನ್ನಪ್ಪಿದ್ದ ಐವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಪಾದಚಾರಿಗಳು ಎನ್ನಲಾಗಿದೆ. ಉಗ್ರರ ದಾಳಿ ವೇಳೆ ವೆಸ್ಟ್ಮಿನ್ಸ್ಟ್ಟ್ ಪ್ರದೇಶದಲ್ಲಿದ್ದ ಪ್ರಧಾನಿ ಥೆರೆಸಾ ಮೇ ಅವರನ್ನು ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ಕಾರಿನಲ್ಲಿ ಬೇರೆಡೆ ಕಳಿಸಿದ್ದಾರೆ. ಪ್ರಧಾನಿ ಸುರಕ್ಷಿತವಾಗಿದ್ದು, ಅವರ ಭದ್ರತೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.