ಹೊಸದಿಲ್ಲಿ: ಅರುಣಾಚಲ ಪ್ರದೇಶಕ್ಕೆ ದಲೈಲಾಮಾ ಭೇಟಿ ಕೊಡುತ್ತಿರುವುದು ಧಾರ್ಮಿಕವಾಗಿದ್ದು, ರಾಜಕೀಯವಾಗಿ ಅಲ್ಲ. ಹೀಗಾಗಿ ಈ ವಿಚಾರವಾಗಿ ಚೀನಾ ವಿವಾದಗಳನ್ನು ಸೃಷ್ಟಿಸಬಾರದು ಎಂದು ಮಂಗಳವಾರ ಕೇಂದ್ರ ಸರ್ಕಾರ ತಿಳಿಸಿದೆ.
ಏ.4 ರಿಂದ 13ರವರೆಗೆ ಅರುಣಾಚಲ ಪ್ರದೇಶದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಲೈಲಾಮಾ ಅವರು ಭಾಗವಹಿಸುತ್ತಿದ್ದು, ಈ ಹಿನ್ನಲೆ ಚೀನಾ ತೀವ್ರ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದೆ.
ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಈ ಹಿನ್ನಲೆ ಪ್ರತಿಕ್ರಿಯೆ ನೀಡಿದ್ದು, ದಲೈಲಾಮಾ ಅವರು ಗೌರವಯುತ ಗುರುಗಳಾಗಿದ್ದು, ಭಾರತದ ಜನತೆ ಅವರನ್ನು ಗೌರವಿಸುತ್ತದೆ. ದಲೈಲಾಮಾ ಭೇಟಿ ಧಾರ್ಮಿಕವಾಗಿದ್ದು, ರಾಜಕೀಯ ಪ್ರೇರಿತವಲ್ಲ. ಭೇಟಿ ವೇಳೆ ದಲೈಲಾಮಾ ಅವರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದು, ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಈ ವಿಚಾರ ಸಂಬಂಧ ವಿವಾದವನ್ನು ಸೃಷ್ಟಿಸಬಾರದು ಎಂದು ಅವರು ತಿಳಿಸಿದ್ದಾರೆ.
ಚೀನಾ ರಾಷ್ಟ್ರದ ಆಂತರಿಕ ವಿಚಾರದಲ್ಲಿ ಭಾರತ ತಲೆ ಹಾಕಿಲ್ಲ. ಭಾರತದ ಆಂತರಿಕ ವಿಚಾರಗಳಲ್ಲಿ ಚೀನಾ ಕೂಡ ತಲೆ ಹಾಕಬಾರದು. ಅರುಣಾಚಲ ಪ್ರದೇಶ ಜನತೆ ನೆರೆರಾಷ್ಟ್ರದೊಂದಿಗೆ ಉತ್ತಮ ಸಂಬಂಧದೊಂದಿಗೆ ಇರಲು ಬಯಸುತ್ತದೆ. ಚೀನಾ ನೀತಿಗಳನ್ನು ಭಾರತ ಗೌರವಿಸುತ್ತದೆ. ಇದೇ ರೀತಿಯ ಪ್ರತಿಕ್ರಿಯೆಯನ್ನೇ ಚೀನಾ ರಾಷ್ಟ್ರದಿಂದಲೂ ಭಾರತ ಬಯಸುತ್ತದೆ.