ಮುಂಬಯಿ: ಛಾಯಾಕಿರಣ ಕನ್ನಡ ಮಾಸಿಕದ ಮೂರನೇ ವಾರ್ಷಿಕೋತ್ಸವ ಸಮಾರಂಭವು ಎ. 9ರಂದು ಕಲ್ಯಾಣ್ ಪಶ್ಚಿಮದ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಜರಗಿದ್ದು ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರ ರಿಗೆ, ಗಣ್ಯರ ಸಮ್ಮುಖದಲ್ಲಿ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ಅವರು ಮಾತನಾಡಿತ್ತಾ ಒಂದು ಪತ್ರಿಕೆಯ ಸಂಪಾದಕೀಯವು ಆ ಪತ್ರಿಕೆಯ ಸ್ಥಾನಮಾನವನ್ನು ಉಳಿಸಿ ಬೆಳೆಸುತ್ತದೆ. ಪತ್ರಕರ್ತ ಪ್ರಕಾಶ್ ಕುಂಠಿನಿಯವರು ಕಳೆದ ಮೂರು ವರ್ಷಗಳಿಂದ ಛಾಯಾಕಿರಣ ಮಾಸಿಕವನ್ನು ವ್ಯವಸ್ಥಿತ ರೀತಿಯಲ್ಲಿ ತುಳು-ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರ ರನ್ನು ಗುರುತಿಸಿ ಮಾಧ್ಯಮಶ್ರೀ ಪ್ರಶಸ್ತಿಯನ್ನು ನೀಡಿರುವುದು ಅಭಿನಂದನೀಯ. ಅವರು ಈ ಪ್ರಶಸ್ತಿಗೆ ಅರ್ಹ ವ್ಯಕ್ತಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಮಾಸಪತ್ರಿಕೆಗಳು ಸುದ್ದಿಗಿಂತ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇಂತಹ ಪತ್ರಿಕೆಗಳು ಲೇಖಕರನ್ನು ಬೆಳೆಸುತ್ತದೆ. ಛಾಯಾಕಿರಣ ಪತ್ರಿಕೆಯು ಮುಂಬಯಿಯ ಉದಯೋನ್ಮುಖ ಸಾಹಿತಿಗಳ ಪರಿಚಯವನ್ನು ಮಾಡುತ್ತಿದೆ. ಈ ಪತ್ರಿಕೆ ಯನ್ನು ಇನ್ನೂ ಬೆಳೆಸಬೇಕಾದುದು ಓದುಗರ, ಲೇಖಕರ ಕರ್ತವ್ಯವವಾಗಿದೆ ಎಂದರು.
ಪತ್ರಿಕೆಯ ಗೌರವ ಸಂಪಾದಕ ಸಾಹಿತಿ ಬಿ. ಎಸ್. ಕುರ್ಕಾಲ್ ಅವರು ಮಾತನಾಡಿ, ಇದು ನಮ್ಮೆಲ್ಲರ ಪತ್ರಿಕೆ. ಇದನ್ನು ನಾವೆಲ್ಲರೂ ಸೇರಿ ಬೆಳೆಸಬೇಕು. ಮೂರು ವರ್ಷದ ಈ ಕೂಸು ನೂರು ವರ್ಷ ಸಾಗಲಿ ಎಂದರು.
ಪತ್ರಿಕೆಯ ಸಂಪಾದಕ ಪ್ರಕಾಶ್ ಕುಂಠಿನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರದಲ್ಲಿ 25 ವರ್ಷಗಳಿಗೂ ಮಿಕ್ಕಿ ಪತ್ರಿಕೋದ್ಯಮದಲ್ಲಿರುವ ಮುಂಬಯಿ ನ್ಯೂಸ್ ಸುದ್ದಿ ಸಂಪಾದಕರಾಗಿ ಹೆಸರುವಾಸಿಯಾಗಿರುವ ಹೇಮರಾಜ್ ಕರ್ಕೇರ ಅವರನ್ನು ಗೌರವಿಸಲು ಅರ್ಹವಾದ ವ್ಯಕ್ತಿ ಎಂದು ತಿಳಿದು, ಆಯ್ಕೆಮಾಡಿ ಸಮ್ಮಾನಿಸಿದ್ದೇವೆ. ಪ್ರಶಸ್ತಿ ಪಡೆದ ಹೇಮರಾಜ್ ಕರ್ಕೇರ ಅವರ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ನುಡಿದು ಶುಭ ಹಾರೈಸಿದರು.
ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೆಯ ಉಪಸಂಪಾದಕಿ ಜ್ಯೋತಿ ಪ್ರಕಾಶ್ ಕುಂಠಿನಿ ಅವರು ವಂದಿಸಿದರು. ಪ್ರಾರಂಭದಲ್ಲಿ ಕವಿಗೋಷ್ಠಿ ನಡೆಯಿತು. ಪತ್ರಿಕೆಯ ಸಹಾಯಕ ಸಂಪಾದಕಿ ಶಾಲಿನಿ ಅಜೆಕಾರು ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಪತ್ರಿಕೆಯ ಅಭಿವೃದ್ಧಿಗೆ ಸಹಕರಿಸಿದ ಉದ್ಯಮಿಗಳಾದ ಡಾ. ಸುರೇಂದ್ರ ವಿ. ಶೆಟ್ಟಿ, ಪ್ರಭಾಕರ ಜಿ. ಶೆಟ್ಟಿ, ಗುರುದೇವ್ ಭಾಸ್ಕರ್ ಶೆಟ್ಟಿ, ಟಿ. ಎಸ್. ಉಪಾಧ್ಯಾಯ, ಸತೀಶ್ ಎನ್. ಶೆಟ್ಟಿ, ನಗರ ಸೇವಕ ದಯಾಶಂಕರ್ ಪಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.