ಮಡಿಕೇರಿ: ರಾಜಧಾನಿ ದೆಹಲಿಯ ಕರ್ನಾಟಕ ಸಂಘದಲ್ಲಿ ನಡೆದ ಕೊಡವ-ಅರೆಭಾಷೆ ಸಂಭ್ರಮ ನೆರೆದ ಪ್ರೇಕ್ಷಕರ ಮನಸೆಳೆಯಿತು.
ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್ ನ ಕಲಾವಿದರು ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರ ಸಂಸ್ಸೃತಿಯನ್ನು ಬಿಂಬಿಸುವ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದರಲ್ಲಿ ಕೊಡಗಿನ ಹ್ಮತ್ತರಿ, ಹರಿಸೇವೆ, ಕೈಲುಮುಹೂರ್ತ, ನಾಟಿ ಸಂಭ್ರಮ, ಭತ್ತ ನೆಡುವುದು, ಸೋಬಾನೆ ಇತ್ಯಾದಿಗಳು ಮತ್ತು ದ.ಕ. ಜಿಲ್ಲೆಯ ಬಲೀಂದ್ರ ಪೂಜೆ, ಕಂಗೀಲು ಕುಣಿತ, ಚೆನ್ನುಕುಣಿತ, ಆಟಿ ಕಳೆಂಜ ಮುಂತಾದ ಕಲಾಪ್ರದರ್ಶನಗಳು ನೋಡುಗರ ಮನತಟ್ಟಿತು.
ಕುಶಾಲನಗರದ ಆಟಿಟ್ಯೂಡ್ ತಂಡದಿಂದ ಮನಮೋಹಕ ನೃತ್ಯಗಳು ಮೂಡಿಬಂದವು. ಸ್ಥಳೀಯ ಕಲಾವಿದರಿಂದ ಗಾಯನ ಕಾರ್ಯಕ್ರಮಗಳು ನಡೆಯಿತು. ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ. ಕೊಡಗು ಪ್ರತ್ಯೇಕತೆಯ ಕೂಗುಗಳು ನಿಲ್ಲಬೇಕೆಂದರೆ ಕೊಡಗಿನ ಬೇಡಿಕೆಗಳಿಗೆ ಸರ್ಕಾರವು ಸ್ಪಂದಿಸಬೇಕು. ಕೊಡಗಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದರು.
ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಮಾತನಾಡಿ ಕೊಡವ ಮತ್ತು ಅರೆಭಾಷೆಯ ಅಭಿವೃದ್ಧಿಗೆ ಸರ್ಕಾರದ ಜೊತೆ ಜೊತೆಗೆ ಜನಾಂಗದವರೂ ಕೂಡ ಸೇರಿ ದುಡಿಯಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಂಘಟಕ ದೇವಂಗೋಡಿ ಹರೀಶ್, ಖ್ಯಾತ ಸಾಹಿತಿ ನಾಗತಿಹಳ್ಳಿ ರಮೇಶ, ಕೊಡವ ಸಮಾಜದ ಅಧ್ಯಕ್ಷರಾದ ಎಂ.ಕಾರ್ಯಪ್ಪ ಅಪ್ಪಯ್ಯ ಉಪಸ್ಥಿತರಿದ್ದರು. ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಪಿ.ಬೆಳ್ಯಪ್ಪ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜು ವಂದಿಸಿದರು.