ಹೊಸದಿಲ್ಲಿ: ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ರಂಗಗಳಲ್ಲಿ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಚುನಾವಣೆಯಲ್ಲಿ ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ನರೇಂದ್ರ ಮೋದಿ ಆಪ್ತ ಆರ್ಥಿಕ ತಜ್ಞ ಮತ್ತು ಆರ್ ಎಸ್ಎಸ್ ನಂಟು ಹೊಂದಿರುವ ಎಂ ಆರ್ ವೆಂಕಟೇಶ್ ತಿಳಿಸಿದ್ದಾರೆ.
ವಿಜ್ಞಾನ ಮತ್ತ ತಂತ್ರಜ್ಞಾನ, ಉದ್ಯಮ ಅಥವಾ ಧಾರ್ಮಿಕ ರಂಗದವರನ್ನು ರಾಷ್ಟ್ರಪತಿ ಹುದ್ದೆಗೆ ತರಬೇಕೆಂದು ಬಿ.ಜೆ.ಪಿಯ ಚಿಂತನೆಯಾಗಿತ್ತು. ಯಾವುದೇ ರಾಜಕೀಯ ಪಕ್ಷದ ಜೊತೆಗೂ ಗುರುತಿಸಿಕೊಳ್ಳದೆ ಶಿಕ್ಷಣ ಸಾಮಾಜಿಕ ಧಾರ್ಮಿಕ ರಂಗದಲ್ಲಿ ಹಲವಾರು ಸೇವೆ, ಇವೆಲ್ಲ ರಾಷ್ಟ್ರಪತಿ ಆಯ್ಕೆಗೆ ಪೂರಕ ಅಂಶಗಳಾಗಿವೆ. ಸದ್ಯ ರಾಷ್ಟ್ರಪತಿ ಆಯ್ಕೆಗೆ ಸಣ್ಣ ಮತ ಕೊರತೆ ಎದುರಿಸುತ್ತಿರುವ ಎನ್ ಡಿ ಎ ಪಾಲಿಗೆ ಡಾ.ವೀರೇಂದ್ರ ಹೆಗ್ಗಡೆ ಅಭ್ಯರ್ಥಿ ಆದಲ್ಲಿ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇದೆ. ಹೆಗ್ಗಡೆ ನಡೆಸುತ್ತಿರುವ ರುಡ್ ಸೆಟ್ ನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿನಂದಿಸಿ, ಅಮೇಥಿ ಕ್ಷೇತ್ರದಲ್ಲೂ ಮಾದರಿತನ್ನು ಅನುಷ್ಠಾನ ಮಾಡಿದ್ದರು.
ರಾಷ್ಟ್ರಪತಿ ಆಯ್ಕೆ ಕುರಿತಾಗಿ ನನಗೆ ಯಾವುದೇ ನೇರ ಮಾಹಿತಿ ಬಂದಿಲ್ಲ. ಆದ್ದರಿಂದ ಈ ಹಂತದಲ್ಲಿ ಪ್ರತಿಕ್ರಿಯಿಸುವುದು ಸರಿಯಲ್ಲ. ಮಂಜುನಾಥನ ಸೇವೆಗಿಂತ ದೊಡ್ಡ ಪದವಿ ಯಾವುದೂ ಇಲ್ಲ ಎಂದು ಹೆಗ್ಗಡೆ ತಿಳಿಸಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಅವರಿಗಿರುವ ಧಾರ್ಮಿಕ ಕಟ್ಟುಪಾಡುಗಳ ನಡುವೆ ಎನ್ ಡಿ ಎ ಆಹ್ವಾನವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಹಂತದ ಬೆಳವಣಿಗೆಗಾಗಿ ಹೆಗ್ಗಡೆಯವರು ಇಂದು ದೆಹಲಿಗೆ ತೆರಳಲಿದ್ದು ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.