ಜಮ್ಮು: ಕಳೆದ ನಾಲ್ಕು ದಿನಗಳಿಂದ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ಸೇರಿ ಬಳಿ ಪಾಕಿಸ್ತಾನ ಸೇನೆ ಒಟ್ಟು 14 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ಈ ವರೆಗೂ ಓರ್ವ ನಾಗರಿಕ ಸಾವನ್ನಪ್ಪಿ, 7 ಜನರು ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಪೂಂಚ್ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನೆ ಇಬ್ಬರು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದೆ. ಕಾಶ್ಮೀರದಲ್ಲಿ ಉಗ್ರರು ಸರಣಿ ದಾಳಿಗಳನ್ನು ನಡೆಸುತ್ತಿದ್ದು, ಕಳೆದ ಮಂಗಳವಾರ ಏಕಕಾಲದಲ್ಲಿ ಮೂರು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ಮಂಗಳವಾರ ನಡೆದ ದಾಳಿಯಲ್ಲಿ ಒಟ್ಟು 7 ಗ್ರೆನೇಡ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 14 ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳಿಂದ ಉಗ್ರರು 4 ರೈಫಲ್ಸ್ ಗಳನ್ನು ಕಸಿದು ಪರಾರಿಯಾಗಿದ್ದಾರೆ.
ಪಾಕಿಸ್ತಾನ ಸೇನೆ ಮಾರ್ಟರ್ ಶೆಲ್ ಗಳು, ಸಣ್ಣ ಶಸ್ತ್ರಾಸ್ತ್ರಗಳು, ಸ್ವಯಂ ಚಾಲಿತ ಆರ್ ಪಿಡಿ ಮೂಲಕ ನೌಶೆರಾ ಸೆಕ್ಟರ್ ಹಾಗೂ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ದಾಳಿಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡುತ್ತಿದೆ ಎಂದು ರಕ್ಷಣಾ ವಕ್ತಾರ ಲೆ.ಕ.ಮನೀಶ್ ಮೆಹ್ತಾ ಅವರು ಹೇಳಿದ್ದಾರೆ.
ಗಡಿಯಲ್ಲಿರುವ ನಾಗರಿಕ ಪ್ರದೇಶಗಳ ಮೇಲೆ ಶೆಲ್, ಮಾರ್ಟರ್ ಬಾಂಬ್, ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಮೂಲಕ ಪಾಕಿಸ್ತಾನ ಸೇನೆ ದಾಳಿ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದ ಈ ಉದ್ಧಟತನಕ್ಕೆ ಇಂದು ಭಾರತೀಯ ಸೇನೆ ದಿಟ್ಟವನ್ನೇ ನೀಡಿದ್ದು, ಭಿಂಬೆರ್ ಗಲಿ ಸೆಕ್ಟರ್ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಇಬ್ಬರು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.