ಲಖನೌ: ದೇಶದಾದ್ಯಂತ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾವಿರಾರು ಜನರೊಂದಿಗೆ ಸೇರಿ ಯೋಗಾಭ್ಯಾಸ ಮಾಡಿದರು.
ಲಖನೌದ ರಮಾಭಾಯ್ ಅಂಬೇಡ್ಕರ್ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ, ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಬೆಳಿಗ್ಗೆ 6.30 ಕ್ಕೆ ಆಗಮಿಸಿದ ಜನರು ವಂದೇ ಮಾತರಂ ಘೋಷಣೆಯೊಂದಿಗೆ ಮಳೆಯ ನಡುವೆಯೂ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಮೋದಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2017ಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಹಾಗೂ ಇಡೀ ವಿಶ್ವದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಯೋಗ ಇಂದು ವಿಶ್ವವನ್ನು ಒಗ್ಗೂಡಿಸುವಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ, ಸರ್ಕಾರೇತರ ಸಂಸ್ಥೆಗಳು ಹಾಗೂ ಯೋಗ ಗುರುಗಳು ಮಳೆಯ ನಡುವೆಯೂ ಸುಮಾರು 80 ನಿಮಿಷಗಳ ಕಾಲ ಯೋಗಾಭ್ಯಾಸವನ್ನು ಮಾಡಿದರು.