ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹದ ಜೊತೆಗೆ ಇತರ 30 ಸಣ್ಣ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಂದು ಆಂಧ್ರದ ಶ್ರೀಹರಿಕೋಟಾ ಇಸ್ರೋ ಬಾಹ್ಯಾಕಾಶ ಕೇಂದ್ರದಿಂದ ಕಾರ್ಟೊಸ್ಯಾಟ್-2 ಸರಣಿಯ PSLV-C38 ಉಪಗ್ರಹ ಹಾಗೂ ಇತರ 30 ಸಣ್ಣ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿದೆ. ಈ ಕಾರ್ಟೊಸ್ಯಾಟ್ -2 ಸರಣಿಯ ಉಪಗ್ರಹ 712 ಕೆ.ಜಿ ತೂಕವಿದ್ದು, ಇತರ 30 ಸಣ್ಣ ಉಪಗ್ರಹಗಳು ಒಟ್ಟು ತೂಕ 243 ಕೆಜಿ ಇವೆ. ಈ 31 ಉಪಗ್ರಹಗಳನ್ನು ಇಸ್ರೋ PSLV-C38 ಯಶಸ್ವಿಯಾಗಿ ಇಂದು ಬೆಳಿಗ್ಗೆ 9:29ಕ್ಕೆ ಸರಿಯಾಗಿ ಕಕ್ಷೆಗೆ ಉಡಾವಣೆಗೊಳಿಸಿತು.
30 ಸಣ್ಣ ಉಪಗ್ರಹಗಳಲ್ಲಿ ಭಾರತದ ಒಂದು ಹಾಗೂ 14 ದೇಶಗಳ 29 ಉಪಗ್ರಹಗಳನ್ನು ಒಳಗೊಂಡಿದೆ. ಅಮೆರಿಕಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ, ಬೆಲ್ಜಿಯಂ, ಚಿಲಿ, ಝೆಕ್ ರಿಪಬ್ಲಿಕ್, ಫಿನ್ಲ್ಯಾಂಡ್, ಇಟಲಿ, ಜಪಾನ್, ಲಾಟ್ವಿಯಾ, ಲಿಥುವೇನಿಯಾ, ಸ್ಲೋವಾಕಿಯಾ ದೇಶಗಳ ಉಪಗ್ರಹಗಳೂ ಇದರಲ್ಲಿವೆ. ವಿವಿಧ ದೇಶಗಳ ಜೊತೆಗೆ ಇಸ್ರೋದ ವಾಣಿಜ್ಯ ವಿಭಾಗ ಅಂತರಿಕ್ಷ ಕಾರ್ಪೊರೇಷನ್ ಲಿ. ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಈ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.